ಜಿಲ್ಲೆ

12 ತಾಸಿನಲ್ಲೇ ಸಿದ್ಧವಾಯ್ತು ಅಂಡರ್‌ಪಾಸ್!

ದಾವಣಗೆರೆ:ಎರಡು ದಶಕದಿಂದಲೂ ಸಮಸ್ಯೆಯಾಗಿದ್ದ ಅಶೋಕ ರಸ್ತೆಯ ರೈಲ್ವೆ ಕ್ರಾಸಿಂಗ್‌ನ ಸಮಸ್ಯೆಗೆ ಭಾನುವಾರ ಉತ್ತರ ದೊರೆತಿದೆ. ಲಿಂಗೇಶ್ವರ ದೇವಸ್ಥಾನ ಎದುರಿನಿಂದ ಅಶೋಕ ಥಿಯೇಟರ್ ಪಕ್ಕದ ರಸ್ತೆಗೆ ಸಂಪರ್ಕಿಸುವ ಮಾರ್ಗದಲ್ಲಿ ಅಂಡರ್‌ಪಾಸ್ ನಿರ್ಮಾಣ ಕಾರ್ಯ ಸತತ 8 ತಾಸಿನಲ್ಲಿ ಸಂಪನ್ನಗೊಂಡಿತು.

ಬೆಳಗ್ಗೆ 6 ಗಂಟೆಗೆ ಕಾಮಗಾರಿ ಆರಂಭವಾಗಬೇಕಿತ್ತು. ಮಳೆ ಕಾರಣಕ್ಕೆ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ರೈಲ್ವೆಹಳಿಗಳನ್ನು ತೆಗೆದು ಗುಂಡಿ ಅಗೆಯಲಾಯಿತು. ಕೆಳಭಾಗದಲ್ಲಿ ಸಿದ್ಧಪಡಿಸಿಟ್ಟುಕೊಂಡಿದ್ದ ಕಾಂಕ್ರೀಟ್ ಚೌಕಟ್ಟುಗಳನ್ನು ಅಳವಡಿಸಲಾಯಿತು. ಮೊದಲಿನಂತೆ ಹಳಿಗಳನ್ನು ಜೋಡಿಸಲಾಯಿತು.

2 ದೊಡ್ಡ ಕ್ರೇನ್‌ಗಳು, ಹಿಟಾಚಿ ಜೆಸಿಬಿ ಯಂತ್ರಗಳು, 6 ಟಿಪ್ಪರ್‌ಗಳನ್ನು ಕಾಮಗಾರಿಗೆ ಬಳಸಲಾಗಿತ್ತು. ಸಂಜೆ 4-30ರ ಹೊತ್ತಿಗೆ ಒಂದು ಟ್ರ್ಯಾಕ್ ಸಿದ್ಧಪಡಿಸಿ ರೈಲು ಸಂಚಾರಕ್ಕೆ ಹಸಿರು ನಿಶಾನೆ ತೋರಲಾಯಿತು. 4.40ರ ಹೊತ್ತಿಗೆ ರೈಲು ಅಂಡರ್‌ಪಾಸ್ ಮೇಲೆ ಸಂಚಾರ ಮಾಡುತ್ತಿದ್ದಂತೆ ಅಲ್ಲಿ ನೆರೆದ ಜನರು ಕೇಕೆ ಹಾಕಿ ಸಂಭ್ರಮಿಸಿದರು. ಎರಡನೇ ಟ್ರ್ಯಾಕ್ ಕೂಡ 8-40ರ ಹೊತ್ತಿಗೆ ಪೂರ್ಣಗೊಂಡಿತು. 7.2 ಕೋಟಿ ರೂ.ಗಳ ಈ ಯೋಜನೆಯಡಿ 22 ಅಡಿ ಅಗಲ, 10 ಅಡಿ ಎತ್ತರದ ಅಂಡರ್‌ಪಾಸ್ ಸಿದ್ಧಗೊಂಡಿತು. ಮೋಡ ಮುಸುಕಿದ ವಾತಾವರಣದ ನಡುವೆಯೂ ಕಾಮಗಾರಿ ನಡೆಯುತ್ತಿದ್ದಂತೆ ಕುತೂಹಲದಿಂದ ನೋಡುತ್ತಿದ್ದ ಸಾರ್ವಜನಿಕರು ರೈಲು ಸಂಚರಿಸುವವರೆಗೆ ಕದಲಲಿಲ್ಲ. ದ್ವಿಚಕ್ರ ವಾಹನಗಳು, ಕಾರು, ಆಟೋ ಇತ್ಯಾದಿ ಲಘು ವಾಹನಗಳು ಸಂಚರಿಸಲು ಅವಕಾಶವಾಗಲಿದೆ. ಮುಂದಿನ ಹಂತದಲ್ಲಿ ಪದ್ಮಾಂಜಲಿ ಟಾಕೀಸ್ ಸಮೀಪ ಎರಡನೇ ಅಂಡರ್‌ಪಾಸ್ ನಿರ್ಮಾಣವಾಗಲಿದ್ದು ಅಲ್ಲಿ ಭಾರೀ ವಾಹನಗಳು ಸಂಚರಿಸಬಹುದಾಗಿದೆ. ಈಗ ನಿರ್ಮಿತ ಅಂಡರ್‌ಪಾಸ್‌ಗೆ ಸಂಪರ್ಕಿಸುವ ರಸ್ತೆ ಒಳಚರಂಡಿ, ಕೇಬಲ್ ಅಳವಡಿಕೆ ಸೇರಿ ಬಾಕಿ ಕಾಮಗಾರಿಗೆ ಕನಿಷ್ಟ ಮೂರು ತಿಂಗಳು ಬೇಕಾಗಲಿದೆ ಎನ್ನುತ್ತಾರೆ ರೈಲ್ವೆ ಅಧಿಕಾರಿಗಳು. ಗಿಜಿಗುಡುತ್ತಿದ್ದ ರೈಲ್ವೆ ನಿಲ್ದಾಣ: ಅಂಡರ್‌ಪಾಸ್ ನಿರ್ಮಾಣದ ಹಿನ್ನೆಲೆಯಲ್ಲಿ ರೈಲುಗಳ ಸಂಚಾರ ವಿಳಂಬವಾಗುವ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದರೂ ನಿಲ್ದಾಣದಲ್ಲಿ ಬೆಳಗ್ಗೆಯಿಂದಲೆ ಜನಸಂದಣಿ ಕಂಡುಬಂತು. ರೈಲ್ವೆ ಟಿಕೆಟ್‌ಗಳಿಗಾಗಿ ಜನರು ಸರದಿ ಸಾಲಿನಲ್ಲಿ ನಿಂತಿದ್ದರು. ತಡವಾಗಲಿದೆ ಎಂದು ರೈಲ್ವೆ ಸಿಬ್ಬಂದಿ ಹೇಳಿದ್ದರೂ ಜನರು ಕೆಲವು ತಾಸುಗಳವರೆಗೆ ನಿಲ್ದಾಣದಲ್ಲೆ ಕಾಲ ಕಳೆದರು.