ಜಿಲ್ಲೆ

12 ಉದ್ಯಾನವನಗಳ ಅಭಿವೃದ್ಧಿ: 1.74 ಕೋಟಿ ರೂ., ವೆಚ್ಚ

ತುಮಕೂರು: ನಗರದ ವಿವಿಧ ಬಡಾವಣೆಯ 12 ಉದ್ಯಾನವನಗಳನ್ನು 1.74 ಕೋಟಿ ರೂ., ವೆಚ್ಚದಲ್ಲಿ ತುಮಕೂರು ನಗರಾಭಿವೃದ್ಧಿ (ಟೂಡಾ) ವತಿಯಿಂದ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಈವರೆಗೆ ಸ್ಮಾರ್ಟ್​ಸಿಟಿ ವತಿಯಿಂದ 35 ಕೋಟಿ ರೂಪಾಯಿವರೆಗೆ ನಗರದಲ್ಲಿ ಉದ್ಯಾನವನಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್​ ಹೇಳಿದರು.

ನಗರದ ಮಾರುತಿನಗರ 3ನೇ ಅಡ್ಡರಸ್ತೆಯ ಸಂಜೀವಿನಿ ಉದ್ಯಾನವನದಲ್ಲಿ ಪಾರ್ಕ್​ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಪಾರ್ಕ್​ಗಳ ಅಭಿವೃದ್ಧಿಗೆ ನಾಗರೀಕ ಸಮಿತಿಗಳ ಸಹಕಾರ ಅತೀ ಮುಖ್ಯವಾಗಿದೆ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ 1.74 ಕೋಟಿ ರೂ., ವೆಚ್ಚದಲ್ಲಿ 12 ಪಾರ್ಕ್​ಗಳನ್ನು ಅಭಿವೃದ್ಧಿಪಡಿಸಲಿದ್ದು, ವರ್ಷದ ಹಿಂದೆಯೇ ಪಾರ್ಕ್​ಗಳ ಅಭಿವೃದ್ಧಿ ಕಾಮಗಾರಿಗೆ ಟೆಂಡರ್​ ಕರೆಯಲಾಗಿತ್ತು. ಕರೊನಾ ಹಿನ್ನಲೆಯಲ್ಲಿ ಯಾರೂ ಟೆಂಡರ್​ನಲ್ಲಿ ಭಾಗವಹಿಸಿದ ಕಾರಣ, ಮತ್ತೆ ಟೆಂಡರ್​ ಕರೆದು ಈಗ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

22 ಲಕ್ಷ ರೂ., ವೆಚ್ಚ: ಮಾರುತಿನಗರದ ಸಂಜೀವಿನಿ ಉದ್ಯಾನವನ ದೊಡ್ಡ ಪಾರ್ಕ್​ ಆಗಿರುವುದರಿಂದ 22 ಲಕ್ಷ ರೂ.,ಗಳ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ನಗರದಲ್ಲಿ ಪಾರ್ಕ್​ಗಳ ನಿರ್ವಹಣೆಯಲ್ಲಿ ನಾಗರೀಕ ಸಮಿತಿಗಳ ಪಾತ್ರ ಹೆಚ್ಚಿನದಾಗಿದೆ. ತುಮಕೂರಿನಲ್ಲಿರುವ ಸುಮಾರು 70&80 ಪಾರ್ಕ್​ಗಳು ಅಭಿವೃದ್ಧಿಪಡಿಸಲಾಗಿದ್ದು ಉಳಿದ ಪಾರ್ಕ್​ಗಳನ್ನು ಅಭಿವೃದ್ಧಿ ಪಡಿಸಲು ಕ್ರಮವಹಿಸಲಾಗುವುದು ಎಂದು ಜ್ಯೋತಿಗಣೇಶ್​ ಹೇಳಿದರು.

ಮಂಜುನಾಥನಗರ ಪಾರ್ಕ್​ಗೆ ಹೆಚ್ಚುವರಿ ವಾಕ್​ಪಾತ್​, ಬೆಂಚುಗಳನ್ನು ಅಳವಡಿಸುವ ಕಾಮಗಾರಿಗೆ 8.30 ಲಕ್ಷ, ಸರಸ್ವತಿಪುರಂ ಪಾರ್ಕ್​ಗೆ ಚೈನ್​ಲಿಂಕ್​ ಫೆನ್ಸಿಂಗ್​ ಅಳವಡಿಸುವ ಕಾಮಗಾರಿಗೆ 8.50 ಲಕ್ಷ, ಮಾರುತಿನಗರ ಸಂಜೀವಿನಿ ಪಾರ್ಕ್​ ಅಭಿವೃದ್ಧಿಗೆ 21.90 ಲಕ್ಷ, ಮಹಾಲ್ಮನಗರ 5ನೇ ಕ್ರಾಸ್​ 2ನೇ ಮುಖ್ಯರಸ್ತೆಯಲ್ಲಿರುವ ಪಾರ್ಕ್​ ಅಭಿವೃದ್ಧಿಗೆ 11 ಲಕ್ಷ ರೂ., ಅನುದಾನ ಒದಗಿಸಲಾಗಿದೆ ಎಂದು ಟೂಡಾ ಅಧ್ಯಕ್ಷ ಬಿ.ಎಸ್​.ನಾಗೇಶ್​ ತಿಳಿಸಿದರು.

ಪಾರ್ಕ್​ಗಳ ಸಂರಕ್ಷಣೆಗೆ ಟೂಡಾ ಆಯುಕ್ತರಿಗೆ ಜವಾಬ್ದಾರಿ ನೀಡಲಾಗಿದೆ. ಆಲದಮರ ಪಾರ್ಕ್​ನಿರ್ವಹಣೆಯನ್ನು ಪ್ರೆಸ್​ ಕ್ಲಬ್​ಗೆ ಕೊಡಲಾಗಿದ್ದು, ಅದೇ ರೀತಿ ನಾಗರೀಕ ಸಮಿತಿಗಳು, ಎಂಎನ್​ಸಿ ಕಂಪನಿಗಳು, ಕೈಗಾರಿಗಳು ಪಾರ್ಕ್​ಗಳ ನಿರ್ವಹಣೆಗೆ ಮುಂದೆ ಬಂದರೆ ಅವರಿಗೆ ದತ್ತು ಕೊಡಲಾಗುತ್ತದೆ. ಮಾರುತಿನಗರದ ಸಂಜೀವಿನಿ ಪಾರ್ಕ್​ ಅಭಿವೃದ್ಧಿಗೆ ಇಲ್ಲಿನ ಹಿತರಕ್ಷಣಾ ಸಮಿತಿಯೇ ಅಚ್ಚುಕಟ್ಟಾಗಿ ನಿರ್ವಹಣೆ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಕಾರ್ಪೊರೇಟ್​ ವಲಯದವರಿಂದ ಸಿಎಸ್​ಆರ್​ ಅನುದಾನ ಪಡೆದು ಮತ್ತಷ್ಟು ಅಭಿವೃದ್ಧಿಪಡಿಸಲಿ. > ಜಿ.ಬಿ.ಜ್ಯೋತಿಗಣೇಶ್​ ನಗರ ಶಾಸಕ