ಜಿಲ್ಲೆ

ಉಡುಪಿಗೆ 12 ಸಾವಿರ ಕೋವಿಶೀಲ್ಡ್ ಲಸಿಕೆ

ಉಡುಪಿ: ಜಿಲ್ಲೆಗೆ ಗುರುವಾರ ಬೆಳಗ್ಗೆ ಕೋವಿಶೀಲ್ಡ್ ಲಸಿಕೆ ಆಗಮಿಸಿದ್ದು, ಜಿಲ್ಲಾ ಆರೋಗ್ಯಾಧಿಕಾರಿ ಕಚೇರಿ ಆವರಣದಲ್ಲಿ ಜಾಗಟೆ ಬಾರಿಸುವ ಮೂಲಕ ಲಸಿಕೆ ಹೊತ್ತು ತಂದ ವಾಹನವನ್ನು ಸ್ವಾಗತಿಸಲಾಯಿತು. ಮೊದಲ ಹಂತದಲ್ಲಿ ಜಿಲ್ಲೆಗೆ 12 ಸಾವಿರ ಲಸಿಕೆ ಬಂದಿದೆ. ಮಂಗಳೂರು ಸರ್ಕಾರಿ ಔಷಧಾಲಯ ಉಗ್ರಾಣದಿಂದ ಪೊಲೀಸ್ ಭದ್ರತೆಯಲ್ಲಿ ಬೆಳಗ್ಗೆ 11.55ಕ್ಕೆ ಉಡುಪಿಗೆ ತಲುಪಿತು. ಲಸಿಕೆಯನ್ನು ಡಿಎಚ್‌ಒ ಕಚೇರಿ ಔಷಧಾಲಯ ಉಗ್ರಾಣದಲ್ಲಿ ರೆಫ್ರಿಜರೇಟರ್‌ನಲ್ಲಿ ಸುರಕ್ಷಿತವಾಗಿ ಶೇಖರಿಸಿಡಲಾಯಿತು. ಉಗ್ರಾಣಕ್ಕೆ ಬಿಗು ಪೊಲೀಸ್ ಭದ್ರತೆ ನಿಯೋಜಿಸಲಾಗಿದೆ.

ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ಜಿಲ್ಲೆಯಲ್ಲಿ 22,230 ಮಂದಿ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡುವ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗಿತ್ತು. ಮೊದಲ ಹಂತದಲ್ಲಿ 12 ಸಾವಿರ ಲಸಿಕೆ ಜಿಲ್ಲೆಗೆ ತಲುಪಿದೆ. ಮೊದಲ ಹಂತದಲ್ಲಿ 240 ಶಿಬಿರಗಳನ್ನು ಮಾಡಲು ಉದ್ದೇಶಿಸಲಾಗಿದ್ದು, ಆರೋಗ್ಯ ಕ್ಷೇತ್ರದ ಸರ್ಕಾರಿ, ಖಾಸಗಿ ಅಧಿಕಾರಿಗಳು ಸೇರಿದಂತೆ ಗ್ರೂಪ್ ಡಿಯಿಂದ ತೊಡಗಿ ಎಲ್ಲ ಸಿಬ್ಬಂದಿಗೂ ಲಸಿಕೆ ನೀಡಲಾಗುವುದು. ಬಳಿಕ 94 ಲಸಿಕಾ ಕೇಂದ್ರಗಳಲ್ಲಿ ನೋಂದಾಯಿಸಿದ ಎಲ್ಲ ಸಿಬ್ಬಂದಿಗೆ ಲಸಿಕೆ ಹಾಕಲಾಗುವುದು ಎಂದರು.

ಜ.16ರಂದು ಪ್ರಧಾನ ಮಂತ್ರಿ ಚಾಲನೆ ನೀಡಿದ ಬಳಿಕ ಜಿಲ್ಲೆಯ 6 ಕೇಂದ್ರಗಳಲ್ಲಿ 600 ಮಂದಿಗೆ ಲಸಿಕೆ ನೀಡಲಾಗುತ್ತದೆ. 74 ಸರ್ಕಾರಿ ಲಸಿಕಾ ಕೇಂದ್ರ, 20 ಖಾಸಗಿ ಲಸಿಕಾ ಕೇಂದ್ರಗಳಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.  ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಸುಧಿರ್‌ಚಂದ್ರ ಸೂಡ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ನವೀನ್ ಭಟ್, ಕೋವಿಡ್ ನೋಡಲ್ ಅಧಿಕಾರಿಗಳಾದ ಡಾ.ಪ್ರಶಾಂತ್ ಭಟ್, ಡಾ. ಪ್ರೇಮಾನಂದ್, ಆರೋಗ್ಯ ಇಲಾಖೆ ಅಧಿಕಾರಿ ಡಾ.ಎಂಜಿ ರಾಮ ಇದ್ದರು.

28 ದಿನಗಳ ಬಳಿಕ ಇನ್ನೊಂದು ಡೋಸ್: ಜಿಲ್ಲೆಯಲ್ಲಿ ಲಸಿಕೆ ನೀಡುವ ಪ್ರಕ್ರಿಯೆ ಅಚ್ಚುಕಟ್ಟಾಗಿ ನಿರ್ವಹಿಸಲು ಸಿದ್ಧತೆ ಮಾಡಲಾಗಿದೆ. ಆರೋಗ್ಯ ಕಾರ್ಯಕರ್ತರೆಲ್ಲರೂ ನೋಂದಣಿ ಮಾಡಿಸಿದ್ದು, ಲಸಿಕೆ ಬೇಡ ಎಂದು ಯಾರೂ ಹೇಳಿಲ್ಲ ಎಂದು ಜಿಲ್ಲಾದಿಕಾರಿ ತಿಳಿಸಿದರು. ಲಸಿಕೆ ನೀಡುವ ಪ್ರಕ್ರಿಯೆಗೆ 2ನೇ ಹಂತದ ಪಟ್ಟಿ ಸಿದ್ಧಗೊಳ್ಳುತ್ತಿದೆ. ಈ ಪಟ್ಟಿಯಲ್ಲಿ ನಗರಾಭಿವೃದ್ಧಿ ಇಲಾಖೆ, ಪೊಲೀಸ್, ಕಂದಾಯ ಇಲಾಖೆ ಸಿಬ್ಬಂದಿ ಇರಲಿದ್ದಾರೆ. 3ನೇ ಹಂತದಲ್ಲಿ 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ, 50 ವರ್ಷಕ್ಕಿಂತ ಕೆಳಗಿನವರು ಬಿ.ಪಿ., ಸಕ್ಕರೆ ಕಾಯಿಲೆ ಇದ್ದವರಿಗೆ ಲಸಿಕೆ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಕೋವಿಶೀಲ್ಡ್ 0.5 ಎಂಎಲ್‌ನಂತೆ ಒಂದು ಆಯಿಲ್‌ನಲ್ಲಿ 10 ಡೋಸ್ ಇರಲಿದೆ. 1200 ಆಯಿಲ್ ಬಂದಿದೆ. ಮೊದಲ ಹಂತದಲ್ಲಿ 6 ಕೇಂದ್ರಗಳಲ್ಲಿ ಜ.16ರಂದು 11.30ಕ್ಕೆ ಜಿಲ್ಲಾಧಿಕಾರಿ ವ್ಯಾಕ್ಸಿನ್ ನೀಡುವ ಮೂಲಕ ಜಿಲ್ಲಾಸ್ಪತ್ರೆಯಲ್ಲಿ ಉದ್ಘಾಟಿಸಲಿದ್ದಾರೆ. ಜಿಲ್ಲಾಸ್ಪತ್ರೆ, ಉಡುಪಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ, ಉಡುಪಿ ಟಿಎಂಎ ಪೈ ಆಸ್ಪತ್ರೆ, ಕುಂದಾಪುರ ತಾಲೂಕು ಆಸ್ಪತ್ರೆ, ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಆಸ್ಪತ್ರೆ ಕಾರ್ಕಳಗಳಲ್ಲಿ ನೀಡಲಾಗುತ್ತದೆ.

- ಡಾ.ಸುಧೀರ್ ಚಂದ್ರ ಸೂಡ, ಡಿಎಚ್‌ಒ. ಉಡುಪಿ