ಜಿಲ್ಲೆ

ವಾಹನ ಮೇಲೆ ಮರ ಬಿದ್ದು ವಧು ಸೇರಿ 12 ಜನರಿಗೆ ಗಾಯ

ರಾಮದುರ್ಗ: ಬಿರುಗಾಳಿಗೆ ಚಲಿಸುತ್ತಿದ್ದ ಕ್ರೂಸರ್ ವಾಹನದ ಮೇಲೆ ಮರ ಬಿದ್ದ ಪರಿಣಾಮ ವಾಹನದಲ್ಲಿದ್ದ ವಧು ಸೇರಿ ಸುಮಾರು 12 ಜನರಿಗೆ ಗಂಭೀರ ಗಾಯಗಳಾದ ಘಟನೆ ತಾಲೂಕಿನ ದೊಡಮಂಗಡಿ ಗ್ರಾಮದ ಹತ್ತಿರ ಗುರುವಾರ ರಾತ್ರಿ ನಡೆದಿದೆ.

ಏ.26ರಂದು ಮದುವೆ ಇದ್ದ ಕಾರಣಕ್ಕೆ ಧಾರವಾಡದಿಂದ ರಾಮದುರ್ಗ ತಾಲೂಕಿನ ಕಿಲ್ಲಾ ತೊರಗಲ್ ಗ್ರಾಮದ ಕಡೆಗೆ ವಧುವನ್ನು ಕರೆದುಕೊಂಡು ಹೊರಟಿದ್ದ ಕ್ರೂಸರ್ ವಾಹನ ದೊಡಮಂಗಡಿಯಿಂದ ರಾಮದುರ್ಗ ಮಾರ್ಗವಾಗಿ ಸಂಚರಿಸುವ ಸಂದರ್ಭದಲ್ಲಿ ಬಿರುಗಾಳಿಗೆ ವಾಹನದ ಮೇಲೆ ಬೇವಿನಮರ ಉರುಳಿ ಈ ಅವಘಡ ಸಂಭವಿಸಿದೆ.

ವಾಹನ ಸಂಪೂರ್ಣ ಜಖಂಗೊಂಡಿದೆ. ತಕ್ಷಣ ಗಾಯಾಳುಗಳನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಗಂಭೀರವಾಗಿ ಗಾಯಗೊಂಡಿದ್ದ 7 ಜನರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಹಾಗೂ ಓರ್ವ ವ್ಯಕ್ತಿಯನ್ನು ಬಾಗಲಕೋಟೆ ಆಸ್ಪತ್ರೆಗೆ ದಾಖಲಿಸಲಾಯಿತು. ಘಟನಾ ಸ್ಥಳಕ್ಕೆ ಪಿಎಸ್‌ಐ ಸವಿತಾ ಮುನ್ಯಾಳ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಿಲ್ಲಾ ತೊರಗಲ್ ಗ್ರಾಮದ ರಾಜು ರಾಮಚಂದ್ರ ಪೋಳ ಎಂಬುವರ ಜತೆ ಧಾರವಾಡದ ಎಮ್ಮಿಕೇರಿಯ ಭೂಮಿಕಾ ಲೋಕೇಶ ಶಿಂಧೆ ಅವರ ಏ.26ರಂದು ಮದುವೆ ನಿಶ್ಚಯವಾಗಿತ್ತು. ಆದರೆ, ಗುರುವಾರ ವಧುವರನ್ನು ಕರೆದುಕೊಂಡು ಬರುವಾಗ ವಾಹನ ಮೇಲೆ ಮರ ಬಿದ್ದಿದ್ದರಿಂದ ವಧುವಿಗೆ ಗಾಯಗಳಾಗಿದ್ದವು. ಆದರೆ, ನಿಶ್ಚಯಿಸಿದ ದಿನದಂತೆ ಮದುವೆ ನೆರವೇರಿತು.