ಜಿಲ್ಲೆ

ಗಾಂಜಾ ಪ್ರಕರಣದಡಿ 12 ಜನರ ಬಂಧನ

ಮರಿದೇವ ಹೂಗಾರ

ಹುಬ್ಬಳ್ಳಿ: ಹಳೇಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಅರವಿಂದನಗರದ ಪಿ ಆ್ಯಂಡ್ ಟಿ ಕ್ವಾರ್ಟರ್ಸ್‌ನ ಪಾಳು ಬಿದ್ದ ಕಟ್ಟಡದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ 12 ಜನರನ್ನು ಬಂಧಿಸಿದ್ದು, ಅವರಿಂದ 1 ಕೆಜಿ 365 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ತಿಳಿಸಿದ್ದಾರೆ.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಲಕ್ಷ ರೂ. ಮೌಲ್ಯದ ಗಾಂಜಾ, 2 ಲಕ್ಷ ರೂ. ಮೌಲ್ಯದ 9 ಮೊಬೈಲ್ ಫೋನ್, 1.50 ಲಕ್ಷ ರೂ. ಮೌಲ್ಯದ ಮೂರು ಬೈಕ್, ಎರಡು ಸಾವಿರ ರೂ. ನಗದು ಸೇರಿ ಒಟ್ಟು 4.52 ಲಕ್ಷ ರೂ. ಮೌಲ್ಯದ ಸಾಮಗ್ರಿ ಜಪ್ತಿ ಮಾಡಿದ್ದೇವೆ ಎಂದರು.
ನಗರದ ವಿವಿಧ ಬಡವಾಣೆಯ ಅಭಿಷೇಕ ಹನಮಂತ, ಮಹ್ಮದಆಯಾಜ್ ಜೈನುಲಾಬುದ್ದೀನ, ಇಸ್ಮಾಯಿಲ್ ಮೆಹಬೂಬಾಲಿ, ಜಾಫರ ಅಲಿಯಾಸ್ ಬಾಂಬೆ ಜಾಫರ ಮಕ್ಬುಲ್, ಜುಬೇರಹ್ಮದ ದಾದಾಪೀರ, ಪುರಕಾನ್ ನಿಸಾರಹ್ಮದ, ಶಾನವಾಜ ಗೌಸಮೋದಿನ, ಸೋಹಿಲ್ ನಜೀರಹ್ಮದ, ಮಹ್ಮದಸಾಧೀಕ ರೀಯಾಜ, ರೋಶನ್ ಸೋಯಬ್ ಅಲಿಯಾಸ್ ಬಬ್ಲೂ ಜಮೀಲಅಹ್ಮದ್, ಸಲೀಂ ಹಜರತಸಾಬ್, ಕರೀಂ ಜಾಂಗೀರಖಾನ ಎಂಬುವರನ್ನು ಬಂಧಿಸಲಾಗಿದೆ ಎಂದರು.
ಬುಧವಾರ ರಾತ್ರಿ 10.30ರ ಸುಮಾರಿಗೆ ಬಂದ ಖಚಿತ ಮಾಹಿತಿ ಆಧರಿಸಿ ಹಳೇಹುಬ್ಬಳ್ಳಿ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಸುರೇಶ ಯಳ್ಳೂರ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದೆ ಎಂದರು.
ಬಂಧನ: ಸಿಇಎನ್ ಕ್ರೈಂ ಪೊಲೀಸ್ ಠಾಣೆ ವ್ಯಾಪ್ತಿಯ ಕಾಳಮ್ಮನ ಅಗಸಿ ಹತ್ತಿರ ಪಾಪ್ಪಿಸ್ಟ್ರಾ ಎಂಬ ಅಮಲು ಪದಾರ್ಥ ಮಾರಾಟ ಮಾಡುತ್ತಿದ್ದ ಶರವಣ ಗಿರಿ, ಲಿಹರ್ ಗಿರಿ ಎಂಬುವವರನ್ನು ಬಂಧಿಸಲಾಗಿದೆ. ಅವರಿಂದ 544 ಗ್ರಾಂ ಪೊಪ್ಪೆ ಸ್ಟ್ರಾ ವಶಪಡಿಸಿಕೊಳ್ಳಲಾಗಿದೆ. ಸೈಬರ್ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಬಿ.ಕೆ. ಪಾಟೀಲ ನೇತೃತ್ವದ ತಂಡ ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡಿದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದರು.
ಡಿಸಿಪಿಗಳಾದ ಮಹಾನಿಂಗ ನಂದಗಾವಿ, ಸಿ.ಆರ್. ರವೀಶ ಇತರರಿದ್ದರು.