ತರೀಕೆರೆ: ಪ್ರಸಕ್ತ ಸಾಲಿನಲ್ಲಿ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ 12.90 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಅಧ್ಯಕ್ಷ ಎ.ಎಂ.ಯೋಗೀಶ್ ತಿಳಿಸಿದರು.
ಪಟ್ಟಣದ ಪಿಕಾರ್ಡ್ ಬ್ಯಾಂಕ್ ಆವರಣದಲ್ಲಿ ಏರ್ಪಡಿಸಿದ್ದ 2024-25ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, 74ವರ್ಷಗಳ ಹಿಂದೆ ರೈತರ ಧ್ಯೇಯೋದ್ದೇಶಕ್ಕಾಗಿ ಸ್ಥಾಪಿಸಲಾದ ಬ್ಯಾಂಕ್ ತರೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ ವಿಸ್ತಾರಗೊಂಡಿದೆ. ಒಟ್ಟು 6,875 ಜನ ಸದಸ್ಯರಿದ್ದು, 4,741ಜನರಿಗೆ ವಿವಿಧ ಸಾಲ ನೀಡಲಾಗಿದೆ ಎಂದರು.
ಎ ತರಗತಿ ಸದಸ್ಯರಿಂದ 62 ಲಕ್ಷ, ಬಿ ತರಗತಿ ಸದಸ್ಯರಿಂದ 1.47 ಸಾವಿರ ರೂ ಸೇರಿ ಒಟ್ಟು 64.45 ಲಕ್ಷ ರೂ ಷೇರು ಬಂಡವಾಳ ಸಂಗ್ರಹಿಸಲಾಗಿದೆ. ಮಾರ್ಚ್ ಅಂತ್ಯಕ್ಕೆ ವಿವಿಧ ಕಡೆ 51.13 ಲಕ್ಷ ರೂ. ನಿಧಿ ವಿನಿಯೋಗಿಸಲಾಗಿದೆ. ಪಟ್ಟಣದ ಪಿಕಾರ್ಡ್ ಬ್ಯಾಂಕ್ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ಗೆ ವಿವಿಧ ಯೋಜನೆ ಮೂಲಕ ಪಡೆದ 6.26 ಕೋಟಿ ರೂ.ಸಾಲ ಪಾವತಿಸಬೇಕಾಗಿದ್ದು, ಸದಸ್ಯರಿಂದ 5 ಕೋಟಿ ರೂ ಬಾಕಿ ಬರಬೇಕಿದೆ ಎಂದು ಹೇಳಿದರು.
ಪಿಕಾರ್ಡ್ ಬ್ಯಾಂಕ್ ಉಪಾಧ್ಯಕ್ಷ ಸಿ.ಎಚ್.ದಿವಾಕರ ಮೂರ್ತಿ, ನಿರ್ದೇಶಕರಾದ ಬಿ.ಎಸ್.ಹಾಲಸಿದ್ದಪ್ಪ, ಪಿ.ನಂಜುಂಡಸ್ವಾಮಿ, ಎಚ್.ಆರ್.ನಾಗರಾಜ್, ಕೆ.ಚಂದ್ರಶೇಖರಪ್ಪ, ಎಚ್.ಎಂ.ಕಿರಣ್‌ಕುಮಾರ್, ಆರ್.ತಮ್ಮಯ್ಯ, ಡಿ.ಪ್ರೀತಮ್, ಬಿ.ಎಸ್.ನಾಗರಾಜ್, ಎನ್.ಸಿ.ಹೇಮಲತಾ, ವ್ಯವಸ್ಥಾಪಕ ಜೆ.ಬಿ.ನಾಗೇಶ್, ಸಿಬ್ಬಂದಿ ಜೆ.ಎ.ಗೌತಮ್, ಕಿರಣ್‌ಕುಮಾರ್ ನಾಯಕ, ಬಿ.ಎಸ್.ರೂಪಾ ಇದ್ದರು.