ಜಿಲ್ಲೆ

12.38 ಲಕ್ಷ ರೂ ವೆಚ್ಚದ ಡಿಜಿಟಲ್ ಗ್ರಂಥಾಲಯ ನಿರ್ಮಾಣ ಕಾಮಗಾರಿ

ಅರಕಲಗೂಡು: ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡದೆ ಸರ್ಕಾರದಿಂದ ಅನುದಾನ ತಂದು ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಶಾಸಕ ಎ.ಟಿ. ರಾಮಸ್ವಾಮಿ ಹೇಳಿದರು.


ತಾಲೂಕಿನ ಮಲ್ಲಿಪಟ್ಟಣ ಸಂತೆ ಮೈದಾನದಲ್ಲಿ 12.38 ಲಕ್ಷ ರೂ ವೆಚ್ಚದ ಡಿಜಿಟಲ್ ಗ್ರಂಥಾಲಯ ನಿರ್ಮಾಣ ಕಾಮಗಾರಿಗೆ ಬುಧವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಕಳೆದ ನಾಲ್ಕುವರೆ ವರ್ಷದಿಂದ ಕ್ಷೇತ್ರದಾದ್ಯಂತ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಜನರ ಕನಸು ನನಸು ಮಾಡಲು ಶ್ರಮಿಸಿದ್ದೇನೆ. ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದ ಚೌರಗಲ್ ಬಳಿ 23.5 ಕೋಟಿ ವೆಚ್ಚದಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆ ಸ್ಥಾಪಿಸಿದ್ದು ಫೆ. 11ರಂದು ಉದ್ಘಾಟನೆಯಾಗಲಿದೆ ಎಂದರು.


ಜನ್ಮ ನೀಡಿದ ತಾಯಿ, ಅನ್ನ ನೀಡುವ ತಂದೆ ಹಾಗೂ ಜ್ಞಾನ ನೀಡುವ ಗ್ರಂಥಾಲಯಗಳನ್ನು ಮರೆಯಬಾರದರು. ಕೋಶ ಓದಿ ದೇಶ ಸುತ್ತು ಎನ್ನುವಂತೆ ಎಲ್ಲರೂ ಗ್ರಂಥಾಲಯ ಉಪಯೋಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಗ್ರಾಪಂ ಅಧ್ಯಕ್ಷ ಎಂ.ಆರ್. ರಂಗಸ್ವಾಮಿ ಮಾತನಾಡಿ, ವಿದ್ಯಾರ್ಥಿಗಳು ಹಾಗೂ ಜನತೆ ಓದುವ ಹವ್ಯಾಸ ಬೆಳೆಸಿಕೊಂಡು ಜ್ಞಾನ ವೃದ್ಧಿಸಿಕೊಳ್ಳಬೇಕು. ಗ್ರಾಪಂ ಆವರಣದಲ್ಲಿದ್ದ ಗ್ರಂಥಾಲಯಕ್ಕೆ ಓದುಗರು ಭೇಟಿ ನೀಡದೆ ನಿರುಪಯುಕ್ತವಾಗಿತ್ತು. ಹೀಗಾಗಿ ಡಿಜಿಟಲ್ ಗ್ರಂಥಾಲಯವನ್ನು ಬಸ್ ತಂಗುದಾಣ ಸರ್ಕಲ್ ಬಳಿ ಸ್ಥಾಪಿಸಲು ಯೋಜಿಸಲಾಗಿತ್ತು. ಆದರೆ ಕೆಲವರ ಸ್ವಹಿತಾಸಕ್ತಿಯಿಂದಾಗಿ ಸಂತೆ ಮೈದಾನದ ಬಳಿ ನಿರ್ಮಿಸುವಂತಾಗಿದೆ. ಬಸ್ ತಂಗುದಾಣ ಬಳಿ ನಿತ್ಯ ಸಾಕಷ್ಟು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಕಾಲಾಹರಣ ಮಾಡದೆ ಗ್ರಂಥಾಲಯ ಸದುಪಯೋಗ ಪಡೆದುಕೊಳ್ಳಲು ಸಹಕಾರಿಯಾಗಿತ್ತು. ಇದೀಗ ಸಂತೆ ಮೈದಾನದಲ್ಲಿ ಸ್ಥಾಪಿಸಲಾಗುತ್ತಿದೆ. ಓದುಗರು ಮತ್ತು ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ಭೇಡಿ ನೀಡುವುದನ್ನು ರೂಢಿಸಿಕೊಳ್ಳಬೇಕು ಎಂದರು.


ತಹಸೀಲ್ದಾರ್ ಮೋಹನಕುಮಾರ್, ಗ್ರಾಪಂ ಪಿಡಿಒ ಅರುಣ್ ಕುಮಾರ್, ಕಾರ್ಯದರ್ಶಿ ಕೃಷ್ಣೇಗೌಡ, ಉಪಾಧ್ಯಕ್ಷ ನಾಗರಾಜು, ಸದಸ್ಯರಾದ ಜಯಲಕ್ಷ್ಮೀ, ಸುಮಿತ್ರಮ್ಮ, ಚಂದ್ರೇಗೌಡ, ಪ್ರಕಾಶ್, ಯೋಗೇಶ್, ಲಕ್ಷ್ಮಮ್ಮ, ಪೂಜಾ, ಇಂಜಿನಿಯರ್ ರಾಜೇಂದ್ರ, ಶರತ್, ಮುಖಂಡರಾದ ವೆಂಕಟೇಶ್, ಹರೀಶ್, ಧರ್ಮಯ್ಯ, ರುದ್ರಯ್ಯ ಇತರರಿದ್ದರು.