ಜಿಲ್ಲೆ

11ರಿಂದ ಉತ್ಪಾದಕರ ಲೀ. ಹಾಲಿಗೆ 1.50 ರೂ. ಹೆಚ್ಚಳ

ಮದ್ದೂರು: ಜಿಲ್ಲಾ ಹಾಲು ಒಕ್ಕೂಟಕ್ಕೆ ಹಾಲು ಸರಬರಾಜು ಮಾಡುವ ಹಾಲು ಉತ್ಪಾದಕರಿಗೆ ಫೆ.11 ರಿಂದ ಜಾರಿಗೆ ಬರುವಂತೆ ಪ್ರತಿ ಲೀಟರ್ ಹಾಲಿಗೆ 1.50 ರೂ.ಗಳನ್ನು ಹೆಚ್ಚಿಸಲಾಗಿದೆ ಎಂದು ಒಕ್ಕೂಟದ ಅಧ್ಯಕ್ಷ ರಾಮಚಂದ್ರು ತಿಳಿಸಿದರು.


ತಾಲೂಕಿನ ಗೆಜ್ಜಲಗೆರೆಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ಬುಧವಾರ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಹಿಂದೆ 28.50 ರೂ.ಹಾಲಿನ ಬೆಲೆಯನ್ನು 1.50 ರೂ.ಹೆಚ್ಚಳ ಮಾಡುವ ಮೂಲಕ ಪ್ರತಿ ಲೀಟರ್ ಹಾಲಿಗೆ 30 ರೂ.ನೀಡಲಾಗುವುದು ಎಂದು ತಿಳಿಸಿದರು.


ಫೆ.1ರಿಂದ ಜಾರಿಗೆ ಬರುವಂತೆ ಪಶು ಆಹಾರವನ್ನು 50 ಕೆ.ಜಿ.ಮೂಟೆಗೆ 50 ರೂ. ಕಡಿಮೆ ಮಾಡಲಾಗಿದೆ. 1065 ರೂ. ಇದ್ದ ಪಶು ಆಹಾರ ಈಗ 50 ರೂ. ಕಡಿಮೆಯಾಗಿ 1015 ರೂ.ಗೆ ಸಿಗಲಿದೆ. ಈ ಮೂಲಕ ಹಾಲು ಉತ್ಪಾದಕರಿಗೆ ಹಾಲಿನ ದರ ಹೆಚ್ಚಿಸಿ, ಪಶು ಆಹಾರದ ಬೆಲೆ ಕಡಿಮೆ ಮಾಡಿ ರೈತರಿಗೆ ಅನುಕೂಲ ಕಲ್ಪಿಸಲಾಗಿದೆ ಎಂದು ತಿಳಿಸಿದರು.


ಜಿಲ್ಲಾ ಹಾಲು ಒಕ್ಕೂಟದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪ್ರತಿ ಲೀಟರ್ ಹಾಲಿಗೆ 30 ರೂ.ಗಳನ್ನು ಹಾಲು ಉತ್ಪಾದಕರಿಗೆ ನೀಡಲಾಗುತ್ತಿದೆ. ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದು 5 ತಿಂಗಳಲ್ಲಿ ಮೂರು ಬಾರಿ ಹಾಲಿನ ದರ ಹೆಚ್ಚಿಸಿ 22.50 ರೂ.ಇದ್ದ ಹಾಲಿನ ದರವನ್ನು 30 ರೂ.ಗೆ ಹೆಚ್ಚಳ ಮಾಡಲಾಗಿದೆ. ಮುಂದಿನ ದಿನಗಳಲ್ಲೂ ಹಾಲು ಉತ್ಪಾದಕರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.


ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಮಾತನಾಡಿ, ಹಾಲಿನ ಮೇಲಿನ ಎಂಆರ್‌ಪಿ ದರಕ್ಕಿಂತ ಹೆಚ್ಚಿನ ಹಣವನ್ನು ಯಾವುದೇ ಅಂಗಡಿ (ಏಜೆಂಟ್)ಯವರು ಪಡೆಯಬಾರದು. ಇದರ ವಿರುದ್ಧ ದೂರುಗಳು ಬಂದರೆ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಒಕ್ಕೂಟದ ಉಪಾಧ್ಯಕ್ಷ ರಘುನಂದನ್, ನಿರ್ದೇಶಕರಾದ ರೂಪಾ, ಸಾದೊಳಲು ಸ್ವಾಮಿ, ಕಾಡೇನಹಳ್ಳಿ ರಾಮಚಂದ್ರು, ನೆಲ್ಲಿಗೆರೆ ಬಾಲು, ಶಿವಕುಮಾರ್, ಮಂಜು, ತಮ್ಮಣ್ಣ ಇತರರು ಇದ್ದರು.