ಜಿಲ್ಲೆ

11ನೇ ಶತಮಾನದ ಶಾಸನ ಪತ್ತೆ

ವೀರೇಶ ಸೌದ್ರಿ

ಹಿರೇಕೆರೂರ: ತಾಲೂಕಿನ ಸೀತಿಕೊಂಡ ಗ್ರಾಮದಲ್ಲಿ 11ನೇ ಶತಮಾನದ ಶಾಸನ ಪತ್ತೆಯಾಗಿದೆ.

ಗ್ರಾಮದ ರಿ.ಸ.ನಂ.ನ 118 ಕಟ್ಟೆಪ್ಪ ದೇವರಹಳ್ಳಿಯವರ ಹೊಲದ ಬದುವಿನಲ್ಲಿ ಕಲ್ಯಾಣಿ ಚಾಲುಕ್ಯರ ಎರಡನೆಯ ಜಗದೇಕಮಲ್ಲನ ಕಾಲದ 23 ಸಾಲುಗಳುಳ್ಳ ಶಾಸನ ಪತ್ತೆಯಾಗಿದ್ದು, ಸಂಶೋಧಕರಾದ ಡಾ. ಚಾಮರಾಜ ಕಮ್ಮಾರ ಮತ್ತು ಡಾ.ಎಸ್.ಬಿ. ಚನ್ನಗೌಡ್ರ ಪತ್ತೆ ಮಾಡಿದ್ದಾರೆ.

ಈ ಶಾಸನದ ಮೇಲ್ಭಾಗದಲ್ಲಿ ಸೂರ್ಯ-ಚಂದ್ರ ಮತ್ತು ಹಸು ಕರುವಿಗೆ ಹಾಲುಣಿಸುವ ಶಿಲ್ಪವಿದೆ. ಮೇಲ್ಭಾಗದ ಶಿಲ್ಪದ ಜತೆಗಿರುವ ಶಾಸನ ಶ್ಲೋಕ ಅಸ್ಪಷ್ಟವಾಗಿದೆ. ನಂತರ ಕೆಳಭಾಗದಲ್ಲಿ ಶ್ರೀ ಸ್ವಸ್ತಿ ಸಮಸ್ತ ಭುವನಾಶ್ರಯ ಎಂದು ಆರಂಭವಾಗುವ ಶಾಸನ, 23 ಸಾಲು ಒಳಗೊಂಡಿದೆ. ಇದು ಕೆರೆಗೆ ನೀಡಿದ ಭೂದಾನದ ಮಹತ್ವ ಪಡೆದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಗ್ರಾಮದಲ್ಲಿ ಹೊಂಡದ ದಂಡೆಯಲ್ಲಿ ವೀರಗಲ್ಲು ಅಪ್ರಕಟಿತ ಶಾಸನವಿದ್ದು, ಅಸುಂಡಿಯ ಬಂಮಗೌಂಡನ ಮಗ (ಸ)ಣಪಗೌಂಡನು ಹೋರಾಡಿ ಮರಣಿಸಿದ ವೀರನೊಬ್ಬನ ಉಲ್ಲೇಖವಿದೆ. ಹಾಳುಬಿದ್ದ ರಾಮಲಿಂಗೇಶ್ವರ ದೇವರ ಗರ್ಭಗುಡಿಯಲ್ಲಿ ಲಿಂಗ, ವಿಷ್ಣುವಿನ ಶಿಲ್ಪ, ಅಪರೂಪದ ಹುಲಿಬೇಟೆ ಶಿಲ್ಪ, ನಂದಿ ಶಿಲ್ಪಗಳು ಅಲ್ಲಲ್ಲಿ ಕಂಡುಬರುತ್ತವೆ. ಪೌರಾಣಿಕ ಸ್ತ್ರೀ ನಾಮವಿರುವ ಸೀತಿಕೊಂಡವು ಹತ್ತಿರದ ಬೇಟಕೆರೂರ ಗುಡ್ಡದಲ್ಲಿ ಶ್ರೀರಾಮಚಂದ್ರನು ವಾಸವಾಗಿದ್ದನು. ಅಲ್ಲದೆ, ಈ ಪ್ರದೇಶದಲ್ಲಿ ಸೀತವ್ವ (ಬಾವಿಯ ಹತ್ತಿರ) ವಾಸವಾಗಿದ್ದರಿಂದ ಈ ಊರಿಗೆ ಸೀತಮ್ಮನ ಕೊಂಡ, ಸೀತಮ್ಮನ ಬಾವಿ, ’ಸೀತಿಕೊಂಡ’ವೆಂಬ ಹೆಸರಿದೆ ಎಂಬ ದಂತಕತೆಗಳಿವೆ. ಸಂಶೋಧಕರು ಸೀ+ಪತಿ ಎಂದು ವಿಗ್ರಹಪದ ಗುರುತಿಸಿ ಸೀ= ಎಂಬುದು ಭೂಮಿಯನ್ನು ಕೊರೆದು ನೀರಿನ ಹರಿವನ್ನು, ಪತಿ=ವಾಸಿಸು, ಕೊಂಡ=ನೀರು ನಿಲ್ಲುವ ತಗ್ಗು ಎಂದು ವಿಶ್ಲೇಷಿಸಿ ’ಸೀಪತಿಕೊಂಡ’ ಅರ್ವಾಚಿನಕಾಲದಲ್ಲಿ ’ಸೀತಿಕೊಂಡ’ವಾಗಿದೆ ಎಂದು ವಿವೇಚಿಸಿದ್ದಾರೆ. ಈ ಶಾಸನ ಪತ್ತೆ ಮಾಡುವಲ್ಲಿ ಮಂಜು ಮತ್ತು ಮುತ್ತನಗೌಡ ಚನ್ನಗೌಡ್ರ, ಗ್ರಾಮಸ್ಥರು ಸಹಕರಿಸಿದ್ದಾರೆ.