ಜಿಲ್ಲೆ

ಒಂದೇ ದಿನ 11,786 ಮಹಿಳೆಯರ ಇಸಿಜಿ ಪರೀಕ್ಷೆ

ಜಗದೀಶ ಹೊಂಬಳಿ

ಧಾರವಾಡ: ಕೆಂದ್ರ ಸರ್ಕಾರದ ಸ್ವಸ್ಥ ನಾರಿ, ಸಶಕ್ತ ಪರಿವಾರ ಅಭಿಯಾನದ ಭಾಗವಾಗಿ ನಾರಾಯಣ ಹೆಲ್ತ್‌ನ 20ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಬುಧವಾರ ಒಂದೇ ದಿನ 11,786 ಮಹಿಳೆಯರಿಗೆ ಉಚಿತ ಇಸಿಜಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಲಾಯಿತು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಮಹಿಳೆಯರು ಮತ್ತು ಮಕ್ಕಳಿಗೆ ಉತ್ತಮ ವದ್ಯಕೀಯ ಸೇವೆ ಒದಗಿಸುವ ಉದ್ದೇಶದಿಂದ ಸೆ.17ರಂದು ಸ್ವಸ್ಥ ನಾರಿ, ಸಶಕ್ತ ಪರಿವಾರ ಅಭಿಯಾನ ಆರಂಭಿಸಿದರು. ಈ ಯೋಜನೆಗೆ ನಾರಾಯಣ ಹೆಲ್ತ್ ಕೈ ಜೋಡಿಸಿದೆ. ಮಹಾನಗರ ಮತ್ತು 2ನೇ ಮತ್ತು 3ನೇ ಹಂತದ ನಗರಗಳಲ್ಲಿ ಮಹಿಳೆಯರು ಭಾಗವಹಿಸಿದ್ದರು. ನಾರಾಯಣ ಹೆಲ್ತೃ್ನ ಆಸ್ಪತ್ರೆಗಳು, ಹಾರ್ಟ್ ಸೆಂಟರ್‌ಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳು ಬೆಳಗ್ಗೆ 9ರಿಂದ ಸಂಜೆ 5ರವರೆಗೆ ತೆರೆದು, ಎಲ್ಲ ವಯಸ್ಸಿನ ಮಹಿಳೆಯರಿಗೆ ಯಾವುದೇ ತೊಡಕು ಉಂಟಾಗದ ರೀತಿಯಲ್ಲಿ ಇಸಿಜಿ ಪರೀಕ್ಷೆಯನ್ನು ನಡೆಸಿದವು. ಧಾರವಾಡದ ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್‌ನಲ್ಲಿ ಒಂದೇ ದಿನದಲ್ಲಿ 350 ಇಸಿಜಿ ಪರೀಕ್ಷೆಗಳು ನಡೆದವು.

ಈ ಕುರಿತು ಮಾತನಾಡಿದ ನಾರಾಯಣ ಹೆಲ್ತೃ್ನ ಸಂಸ್ಥಾಪಕ, ಅಧ್ಯಕ್ಷ ಡಾ.ದೇವಿ ಶೆಟ್ಟಿ ಅವರು, ಒಂದೇ ದಿನದಲ್ಲಿ 10,000ಕ್ಕೂ ಅಧಿಕ ಇಸಿಜಿ ಪರೀಕ್ಷೆ ನಡೆಸಿದ್ದು ನಮಗೆ ಖುಷಿ ಕೊಟ್ಟಿದೆ. ನಾರಾಯಣ ಹೆಲ್ತೃ್ನಲ್ಲಿ ನಾವು ರೋಗ ತಡೆಗಟ್ಟುವ ಚಿಕಿತ್ಸೆಯೇ ಆರೋಗ್ಯವಂತ ರಾಷ್ಟ್ರದ ಅಡಿಪಾಯ ಎಂದು ನಂಬಿದ್ದೇವೆ. ಆ ನಂಬಿಕೆಗೆ ಪೂರಕವಾಗಿ ಸ್ವಸ್ಥ ನಾರಿ, ಸಶಕ್ತ ಪರಿವಾರ ಯೋಜನೆ ಮೂಡಿ ಬಂದಿದೆ ಎಂದರು.