ಬಾಗುರು ರೈತ ಸಂಪರ್ಕ ಕೇಂದ್ರದ ಆವರಣದ ಸಮುದಾಯ ಭವನದಲ್ಲಿ ರಾಗಿ ಖರೀದಿ ಕೇಂದ್ರವನ್ನು ಗಣ್ಯರು ಉದ್ಘಾಟಿಸಿದರು. ಬಿ.ಎಚ್.ಶಿವಣ್ಣ, ಎಂ. ಬಸವರಾಜ್, ಎಂ.ರವೀಂದ್ರ, ಎಂ.ಕವನ್, ಸ್ವಾಮಿಗೌಡ, ಅಮಾಸೆಗೌಡ ಇದ್ದರು. 
ಜಿಲ್ಲೆ

ರಾಗಿ ಖರೀದಿಗೆ 1,172 ರೈತರು ನೋಂದಣಿ

ಲೋಕೇಶ್ ಮನು. ಡಿ

ಬಾಗೂರು: ಬಾಗೂರು ಹೋಬಳಿಯಲ್ಲಿ 1,172 ರೈತರು ರಾಗಿ ಖರೀದಿಗೆ ಹೆಸರು ನೋಂದಣಿ ಮಾಡಿಸಿದ್ದಾರೆ. ಇದರಿಂದ 18 ಸಾವಿರ ಕ್ವಿಂಟಲ್ ರಾಗಿಗೆ ಬೆಂಬಲ ಬೆಲೆ ದೊರೆಯುತ್ತದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಚ್.ಶಿವಣ್ಣ ತಿಳಿಸಿದರು.

ಬಾಗೂರು ಹೋಬಳಿ ಕೇಂದ್ರದ ರೈತ ಸಂಪರ್ಕ ಕೇಂದ್ರದ ಆವರಣದ ಸಮುದಾಯ ಭವನದಲ್ಲಿ ಶುಕ್ರವಾರ ರಾಗಿ ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ರೈತರು ತಾವು ಬೆಳೆದ ರಾಗಿಯನ್ನು 20 ಕ್ವಿಂಟಲ್ ಸ್ವತಹ ಖರೀದಿ ಕೇಂದ್ರದಲ್ಲಿ ತೂಕ ಮಾಡಿ ಕೊಟ್ಟರೆ ಕೇಂದ್ರ ಸರ್ಕಾರದ ಬೆಂಬಲ ಬೆಲೆ 20 ಸಾವಿರ ಹಣ ನೇರವಾಗಿ ನಿಮಗೆ ದೊರೆಯುತ್ತದೆ. ಮಧ್ಯವರ್ತಿಗಳಿಗೆ ರಾಗಿ ಮಾರಾಟ ಮಾಡಬೇಡಿ. ಖರೀದಿ ಕೇಂದ್ರದಲ್ಲಿ ನಿಮಗೆ ಕ್ವಿಂಟಾಲ್‌ಗೆ 4,290 ರೂ.ಗೆ ಸರ್ಕಾರ ರಾಗಿ ಖರೀದಿಸುತ್ತಿದೆ. ನೋಂದಣಿಯಾದ ಎಲ್ಲ ರೈತರ ರಾಗಿಯನ್ನು ಖರೀದಿ ಕೇಂದ್ರದಲ್ಲಿ ಹಂತ ಹಂತ ಖರೀದಿಸುತ್ತಾರೆ. ಅಧಿಕಾರಿಗಳು 1 ದಿನದಲ್ಲಿ ಎಷ್ಟು ಜನರಿಗೆ ಅವಕಾಶ ಕಲ್ಪಿಸುತ್ತಾರೋ ಅಷ್ಟೇ ರೈತರು ಮಾರುಕಟ್ಟೆಗೆ ರಾಗಿ ತರುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ. ಮುಂಜಾಗ್ರತಾ ಕ್ರಮ ವಹಿಸುತ್ತಾರೆ ಎಂದು ತಿಳಿಸಿದರು.

ಮಾರ್ಕೆಟಿಂಗ್ ಫೆಡರೇಶನ್ ಹಾಗೂ ಆಹಾರ ನಾಗರಿಕ ಸರಬರಾಜು ಇಲಾಖೆಗಳ ಮೂಲಕ ಸಾಗಣೆಯಾಗಿ ಮತ್ತೆ ನಿಮ್ಮ ನ್ಯಾಯಬೆಲೆ ಅಂಗಡಿಗಳಲ್ಲಿ ನಿಮ್ಮ ರಾಗಿಯನ್ನು ಸರ್ಕಾರವೇ ನಿಮಗೆ ಉಚಿತವಾಗಿ ನೀಡುತ್ತದೆ. ಆದ್ದರಿಂದ ಆಹಾರದ ರಾಗಿಯಲ್ಲಿ ಕಲಬೆರಿಕೆ ಆಗಬಾರದು. ಗುಣಮಟ್ಟದ ರಾಗಿಯನ್ನು ಖರೀದಿ ಕೇಂದ್ರಕ್ಕೆ ತರಬೇಕು ಎಂದು ಸಲಹೆ ನೀಡಿದರು.

ರಾಗಿ ಖರೀದಿ ಅಧಿಕಾರಿ ಎಂ.ರವೀಂದ್ರ, ಗ್ರೇಡರ್ ಎಂ. ಕವನ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಎನ್. ಬಸವರಾಜ್, ಗ್ರಾಮ ಪಂಚಾಯತಿ ಸದಸ್ಯ ಸ್ವಾಮಿಗೌಡ, ಅಮಾಸೆಗೌಡ ಇತರರು ಹಾಜರಿದ್ದರು.