ಜಿಲ್ಲೆ

117 ವರ್ಷಗಳ ಪುರಾತನ ದೇಗುಲ ನವೀಕರಣ

ಗುಂಡ್ಲುಪೇಟೆ: ಪಟ್ಟಣದ ಕಿತ್ತೂರು ರಾಣಿ ಚನ್ನಮ್ಮ ರಸ್ತೆಯಲ್ಲಿರುವ 117 ವರ್ಷಗಳ ಪುರಾತನ ಶ್ರೀ ರಾಮ ಮಂದಿರ ಕಟ್ಟಡದ ನವೀಕರಣ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸೋಮವಾರ ಆಡಳಿತ ಮಂಡಳಿ ವತಿಯಿಂದ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಯಿತು.

ಶ್ರೀ ರಾಮ ಮಂದಿರವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿ ಕಳೆದ ಮೂರು ದಿನಗಳಿಂದ ಹೋಮ ಹವನ, ಸಂಪ್ರೋಕ್ಷಣೆ ಕಾರ್ಯ ನಡೆಸಲಾಯಿತು. ಪಂಚ ಲೋಹದ ಶ್ರೀರಾಮ, ಸೀತಾ, ಲಕ್ಷ್ಮಣ, ಆಂಜನೇಯ ಸ್ವಾಮಿಯ ಮೂಲ ಮೂರ್ತಿಗಳಿಗೆ ಅರ್ಚಕರು ಹಾಲು, ಮೊಸರು, ಬೆಣ್ಣೆ, ತುಪ್ಪ, ಜೇನುತುಪ್ಪ ಮುಂತಾದ ಪಂಚಗವ್ಯಗಳಿಂದ ಅಭಿಷೇಕ ಮಾಡಿದರು. ವಿವಿಧ ಬಗೆಯ ಹೂವುಗಳಿಂದ ವಿಶೇಷವಾಗಿ ಅಲಂಕಾರ ಮಾಡಲಾಗಿತ್ತು. ನಂತರ ಮಹಾ ಮಂಗಳಾರತಿ ಮಾಡಿ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.

ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಸೇರಿದಂತೆ ನೂರಾರು ಭಕ್ತರು ದೇವರ ದರ್ಶನ ಪಡೆದರು.