ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:ಹದಿನಾರನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ರಾಜ್ಯಕ್ಕೆ ಕೇಂದ್ರ ಸರ್ಕಾರ 11495 ಕೋಟಿ ರೂ. ಅನುದಾನ ಕೊಟ್ಟಿದೆ ಎಂದಾದಲ್ಲಿ ನಾನು ರಾಜಕೀಯ ಬಿಟ್ಟು ಬಿಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 15ನೇ ಹಣಕಾಸು ಆಯೋಗದ ಅವಧಿಯಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು 16ನೇ ಹಣಕಾಸು ಆಯೋಗ ಸ್ಪಷ್ಟಪಡಿಸಿದೆ ಹಾಗೂ ರಾಜ್ಯಕ್ಕೆ 5495 ಕೋಟಿ ರೂ. ವಿಶೇಷ ಅನುದಾನ, ಪೆರಿಪೆರಲ್ ರಿಂಗ್ ರೋಡ್ಗೆ 3 ಸಾವಿರ ಕೋಟಿ ರೂ. ಮತ್ತು ಕೆರೆಗಳ ಅಭಿವೃದ್ಧಿ ಗೆ 3 ಸಾವಿರ ಕೋಟಿ ರೂ. ಅನುದಾನ ನೀಡಬೇಕೆಂದು ಶಿಫಾರಸು ಮಾಡಿತ್ತು. ಕೇಂದ್ರದವರು ಈ ಹಣ ಕೊಟ್ಟಿದ್ದಾರಾ? ಕೊಟ್ಟಿದ್ದರೆ ನಾನು ಈಗಲೇ ರಾಜಕೀಯ ಬಿಟ್ಟು ಬಿಡುತ್ತೇನೆ. ಕೇಂದ್ರ ಸಚಿವ ಪ್ರಲ್ಗಾದ ಜೋಶಿ ರಾಜಕೀಯ ಬಿಟ್ಟು ಬಿಡುತ್ತಾರ ಎಂದು ಸವಾಲು ಹಾಕಿದರು.
ರಾಜ್ಯದಿಂದ ಕೇಂದ್ರಕ್ಕೆ ತೆರಿಗೆ ರೂಪದಲ್ಲಿ ವಾರ್ಷಿಕವಾಗಿ 4.55 ಲಕ್ಷ ಕೋಟಿ ರೂ. ಪಾವತಿಯಾಗುತ್ತದೆ. ರಾಜ್ಯಕ್ಕೆ ವಾಪಸ್ ಬರುವುದು 55-60 ಸಾವಿರ ಕೋಟಿ ರೂ. ಮಾತ್ರ. ಇದು ಅನ್ಯಾಯ ಅಲ್ಲವಾ ? ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಹೇಳಿದರೆ ಅದನ್ನು ರಾಜಕೀಯ ಎಂದರೆ ಏನು ಹೇಳುವುದು ? ರಾಜ್ಯಕ್ಕೆ ಅನ್ಯಾಯವಾಗಿದೆಯೆಂದು ಪ್ರಲ್ಹಾದ ಜೋಶಿ, ಬಸವರಾಜ ಬೊಮ್ಮಾಯಿ, ಜಗದೀಶ ಶೆಟ್ಟರ್ ಯಾವತ್ತಾದರೂ ಮಾತನಾಡಿದ್ದಾರಾ ಎಂದು ಪ್ರಶ್ನಿಸಿದರು.
ಹಿಂದೆ ವಕ್ಪ್ ಆಸ್ತಿ ಒತ್ತುವರಿ ಆಗಿದೆ ಎಂದು ಸಿಎಂ ಆಗಿದ್ದಾಗ ಬಸವರಾಜ ಬೊಮ್ಮಾಯಿ ಅವರೇ ಹೇಳಿದ್ದರು. ಈಗ ಅವರು ರಾಜಕೀಯಕ್ಕಾಗಿ ಉಲ್ಟಾ ಮಾತನಾಡುತ್ತಿದ್ದಾರೆ. ಯಡಿಯೂರಪ್ಪ, ಸದಾನಂದ ಗೌಡ, ಜಗದೀಶ ಶೆಟ್ಟರ್, ಕುಮಾರಸ್ವಾಮಿ ಸಿಎಂ ಆಗಿದ್ದಾಗ ವಕ್ಪ್ ಆಸ್ತಿಗೆಗೆ ಸಂಬಂಧಿಸಿದ 216 ಪ್ರಕರಣಗಳಲ್ಲಿ ನೋಟಿಸ್ ನೀಡಿದ್ದರು. ವಕ್ಪ್ ಆಸ್ತಿ ವಿಚಾರದಲ್ಲಿ ನೀಡಿರುವ ನೋಟಿಸ್ ವಾಪಸ್ ಪಡೆಯಬೇಕೆಂದು ಸ್ಪಷ್ಟಪಡಿಸಿದ್ದೇವೆ. ಯಾವುದೇ ಕಾರಣಕ್ಕೆ ರೈತರನ್ನು ಒಕ್ಕಲ್ಲೆಬ್ಬಿಸಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದ್ದೇವೆ ಎಂದರು.
ಗ್ಯಾರಂಟಿ ವಿರೋಧಿಗಳು
ಎಲ್ಲ ವರ್ಗದ ಬಡವರಿಗೆ ಆರ್ಥಿಕ, ಸಾಮಾಜಿಕವಾಗಿ ಶಕ್ತಿ ತುಂಬಲು ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿದ್ದೇವೆ. ಶಕ್ತಿ ಇಲ್ಲದವರನ್ನು ದುರುಪಯೋಗ ಮಾಡಿಕೊಳ್ಳುವವರು ಬಿಜೆಪಿಯವರು. ಬಡವರಿಗೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಶಕ್ತಿ ಇರಬಾರದು ಎಂಬುದರಲ್ಲಿ ಬಿಜೆಪಿಯವರು ನಂಬಿಕೆ ಇಟ್ಟುಕೊಂಡವರು. ಅದಕ್ಕೆ ಅವರು ಗ್ಯಾರಂಟಿ ಹಾಗೂ ಬಡವರ ವಿರೋಧಿಗಳು ಎಂದು ಟೀಕಿಸಿದರು.