ಜಿಲ್ಲೆ

ಶರಣತತ್ವ ಪಸರಿಸಿದ ಕುಮಾರ ಸ್ವಾಮೀಜಿ

ಭಾಲ್ಕಿ: ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಷ್ಟಲಿಂಗ ಸಾರಿದವರಲ್ಲಿ ಧಾರವಾಡ ತಪೋವನ ಕುಮಾರ ಸ್ವಾಮಿಗಳು ಮೊದಲಿಗರಾಗಿದ್ದಾರೆ ಎಂದು ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ನ ಅಧ್ಯಕ್ಷರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ನುಡಿದರು.

ಪಟ್ಟಣದ ಚನ್ನಬಸವಾಶ್ರಮ ಪರಿಸರದಲ್ಲಿ ಸೋಮವಾರ ಆಯೋಜಿಸಿದ್ದ ಧಾರವಾಡ ಕುಮಾರ ಸ್ವಾಮಿಗಳ ೧೧೩ನೆಯ ಜಯಂತಿ, ನುಲಿ ಚಂದಯ್ಯನವರ ಜಯಂತಿ ಮತ್ತು ರಕ್ಷಾ ಬಂಧನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ತಪೋವನ ಸ್ವಾಮೀಜಿ ಮಹಾನ್ ಅನುಭಾವಿಗಳು ಆಗಿದ್ದರು. ಅವರ ಅನೇಕ ಕೃತಿಗಳು ಜನಮನದಲ್ಲಿ ಬಸವಭಕ್ತಿಯ ಬೀಜವನ್ನು ಬಿತ್ತುತ್ತವೆ ಪಾಂಡಿತ್ಯ ಮತ್ತು ಅನುಭಾವದ ಸಂಗಮವಾದ ಕುಮಾರ ಸ್ವಾಮಿಗಳು ನಾಡಿನುದ್ದಕ್ಕೂ ಶರಣತತ್ವ ಪ್ರಸಾರ ಮಾಡಿದವರು. ಪ್ರಾರ್ಥನೆಯೇ ಒಂದು ಯೋಗವೆಂದು ಸಾರಿದವರು. ತಪೋವನ ಸ್ವಾಮಿಗಳು ಮತ್ತು ಶ್ರೀ ಡಾ.ಚನ್ನಬಸವ ಪಟ್ಟದ್ದೇವರ ಭೇಟಿಯ ಪ್ರಸಂಗ ಹೃದಯಸ್ಪರ್ಶಿಯಾಗಿದೆ ಎಂದು ತಿಳಿಸಿದರು.

ನೇತೃತ್ವ ವಹಿಸಿದ್ದ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಶರಣ ನುಲಿಯ ಚಂದಯ್ಯನವರು ಕಾಯಕ ಮತ್ತು ಜಂಗಮ ದಾಸೋಹಕ್ಕೆ ಹೆಸರಾದ ಶರಣರು. ಇವರ ಅನೇಕ ವಚನಗಳು ನಮಗೆ ಕಾಯಕದ ಮಹತ್ವವನ್ನು ತಿಳಿಸುತ್ತವೆ. ಇಂದು ರಕ್ಷಾಬಂಧನ ನುಲ ಹುಣ್ಣಿಮೆ. ಭಾರತೀಯ ಸಂಸ್ಕೃತಿಯಲ್ಲಿ ಅಣ್ಣ-ತಂಗಿಯರ ಪ್ರೀತಿಯ ಸಂಕೇತವಾಗಿ ಈ ಹಬ್ಬ ದೇಶದುದ್ದಗಲಕ್ಕೂ ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಸುಮನಬಾಯಿ ಬಾಬುರಾವ ಜಲ್ದೆ ಅಧ್ಯಕ್ಷತೆ ವಹಿಸಿದ್ದರು. ಓಂಪ್ರಕಾಶ ಧಡ್ಡೆ ಅನುಬಾವ ನೀಡಿದರು. ವಿದ್ಯಾವತಿ ಅಷ್ಟೂರೆ, ನಿರ್ಮಲಾ ಪಾಟೀಲ್ ಇತರರಿದ್ದರು.

ಮಹಾದೇವಿ ಅಷ್ಟೂರೆ ಪ್ರಾರ್ಥನೆ ನಡೆಸಿಕೊಟ್ಟರು. ಡಾ. ಅಮೀತ ಅಷ್ಟೂರೆ ಸ್ವಾಗತಿಸಿದರು. ದೀಪಕ ಥಮಕೆ ನಿರೂಪಣೆ ಮಾಡಿದರು. ಅಕ್ಕನಬಳಗದ ಶರಣೆಯರಿಂದ ವಚನ ಸಂಗೀತ ನಡೆಯಿತು.

ಹಿರಿಯ ಪತ್ರಕರ್ತ ಅಶೋಕ ರಾಜೋಳೆ ಮತ್ತು ಕೀಶನರಾವ ಜಾಧವ ಅವರನ್ನು ಶ್ರೀಮಠದ ಪರವಾಗಿ ಸನ್ಮಾನಿಸಲಾಯಿತು. ಕರಡ್ಯಾಳ ಚನ್ನಬಸವೇಶ್ವರ ಗುರುಕುಲ ವಿದ್ಯಾರ್ಥಿಗಳು ನಡೆಸಿಕೊಟ್ಟ ಅಮ್ಮ ರೂಪಕ ನೋಡುಗರ ಗಮನ ಸೆಳೆಯಿತು.