ಜಿಲ್ಲೆ

112 ಹೊಸ ಮತಗಟ್ಟೆಗಳ ಸ್ಥಾಪನೆಗೆ ಶಿಾರಸು

ಚಿತ್ರದುರ್ಗ: ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ 112 ಹೊಸ ಮತಗಟ್ಟೆಗಳನ್ನು ಸ್ಥಾಪಿಸಲು ಚುನಾವಣಾ ಆಯೋಗಕ್ಕೆ ಶಿಾರಸು ಮಾಡುವುದಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.

ಡಿಸಿ ಕಚೇರಿಯಲ್ಲಿ ಬುಧವಾರ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿ, 1,200 ಕ್ಕೂ ಹೆಚ್ಚು ಮತದಾರರಿರುವ 107 ಮತಗಟ್ಟೆ ಹಾಗೂ 2 ಕಿ.ಮೀ.ಗಿಂತ ಹೆಚ್ಚಿನ ಅಂತರವಿರುವ 5 ಹಳ್ಳಿಗಳ ಮತಗಟ್ಟೆಗಳಲ್ಲಿ ಹೊಸದಾಗಿ ಸ್ಥಾಪನೆಗೆ ಪಟ್ಟಿ ಸಿದ್ಧಪಡಿಸಲಾಗಿದೆ ಎಂದರು.

ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿ ಭಾರತೀಯ ಚುನಾವಣಾ ಆಯೋಗಕ್ಕೆ ಪಟ್ಟಿ ಕಳಿಸಿ ಅನುಮೋದನೆ ಪಡೆಯಲಾಗುವುದು. ಇದರಿಂದ ಜಿಲ್ಲೆಯ ಮತಗಟ್ಟೆಗಳ ಸಂಖ್ಯೆ 1,661ರಿಂದ 1,773ಕ್ಕೆ ಏರಿಕೆಯಾಗಲಿದೆ ಎಂದು ಮಾಹಿತಿ ನೀಡಿದರು.

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ: ದೇಶದಲ್ಲಿ 2002ರ ನಂತರ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಆಯೋಗ ಬಿಹಾರದಲ್ಲಿ ವಿಶೇಷ ಪರಿಷ್ಕರಣೆ ಕಾರ್ಯ ಪೂರ್ಣಗೊಳಿಸಿದೆ. ಇತರ ರಾಜ್ಯಗಳಿಗೂ ಅದನ್ನು ವಿಸ್ತರಿಸಿದೆ. ಇದಕ್ಕಾಗಿ ಶೀಘ್ರದಲ್ಲೇ ನಮ್ಮ ರಾಜ್ಯದಲ್ಲಿ ವೇಳಾಪಟ್ಟಿ ಪ್ರಕಟವಾಗಲಿದೆ ಎಂದು ತಿಳಿಸಿದರು.

ಜಿಲ್ಲೆಯ 2002ರ ಮತದಾರರ ಪಟ್ಟಿಯನ್ನು 2025ರ ಪಟ್ಟಿಯೊಂದಿಗೆ ಹೋಲಿಸಿ ಡೇಟಾ ಸಿದ್ಧಪಡಿಸಲಾಗಿದೆ. ಪರಿಷ್ಕರಣೆ ವೇಳೆ ಮತಗಟ್ಟೆ ಅಧಿಕಾರಿಗಳು, ಪ್ರತಿ ಮನೆಗಳಿಗೆ ಭೇಟಿ ನೀಡಿ 18 ವರ್ಷ ಮೇಲ್ಪಟ್ಟವರ ವಿವರ ಸಂಗ್ರಹಿಸಲಿದ್ದಾರೆ. ಈ ಸಂಬಂಧ ಚುನಾವಣಾ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ರಾಜಕೀಯ ಪಕ್ಷಗಳ ಬೂತ್ ಏಜೆಂಟರ ನೇಮಕಕ್ಕೆ ಅವಕಾಶವಿದೆ. ಪರಿಷ್ಕರಣೆ ವೇಳೆ ಮತಗಟ್ಟೆ ಅಧಿಕಾರಿಗಳು ಏಜೆಂಟರನ್ನು ಸಂಪರ್ಕಿಸಿ ಅಗತ್ಯ ಮಾಹಿತಿ ನೀಡಲಿದ್ದಾರೆ ಎಂದರು.

ಕರ್ನಾಟಕ ವಿಧಾನ ಪರಿಷತ್ ಆಗ್ನೇಯ ಪದವಿಧರರ ಕ್ಷೇತ್ರದ ಚುನಾವಣೆಗಾಗಿ ಮತದಾರರ ಪಟ್ಟಿ ತಯಾರಿಕೆ ಪ್ರಕ್ರಿಯೆ ಆರಂಭ ವಾಗಿದೆ. ನಮೂನೆ-18ರಲ್ಲಿ ಹೆಸರು ಸೇರ್ಪಡೆಗೆ ನವೆಂಬರ್ 6ರವರೆಗೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ಎಲ್ಲ ತಾಲೂಕುಗಳು, ನಗರಸಭೆ ವ್ಯಾಪ್ತಿಯಲ್ಲಿ ಸಹಾಯಕ ಮತದಾರರ ನೋಂದಣಾಧಿಕಾರಿ ಹಾಗೂ ನಿರ್ದಿಷ್ಟಾಧಿಕಾರಿಗಳನ್ನು ನೇಮಿಸಲಾಗಿದೆ. ಅರ್ಜಿಗಳು ತಾಲೂಕು ಕಚೇರಿಗಳಲ್ಲಿ ದೊರೆಯಲಿವೆ. ಅರ್ಹ ಪದವೀಧರ ಮತದಾರರು ತಮ್ಮ ಹೆಸರು ನೋಂದಾಯಿಸುವಂತೆ ಎಡಿಸಿ ಮನವಿ ಮಾಡಿದರು.

ಎಸಿ ಮೆಹಬೂಬ್ ಜಿಲಾನಿ ಖುರೇಷಿ, ಚುನಾವಣಾ ತಹಸೀಲ್ದಾರ್ ಡಾ. ನಾಗವೇಣಿ, ಶಿರಸ್ತೇದಾರ್ ಮಲ್ಲಿಕಾರ್ಜುನ ನಾಯಕ, ಡಿ.ಎನ್. ಮೈಲಾರಪ್ಪ, ಸಿ.ಜೆ. ನಾಸೀರುದ್ದೀನ್, ಡಿ. ಗೋಪಾಲಸ್ವಾಮಿ ನಾಯಕ, ಯಶವಂತ್‌ಕುಮಾರ್, ಕೆ.ಎಂ. ಪರುಶುರಾಮ್, ಕೆ.ಗೌಸ್‌ಪೀರ್ ಇದ್ದರು.

ಶಿಾರಸು ಮಾಡಿದ ಹೊಸ ಮತಗಟ್ಟೆ

ವಿಧಾನಸಭಾ ಕ್ಷೇತ್ರ-ಸಂಖ್ಯೆ

ಮೊಳಕಾಲ್ಮೂರು -23

ಚಳ್ಳಕೆರೆ-21

ಚಿತ್ರದುರ್ಗ-20

ಹಿರಿಯೂರು-13

ಹೊಸದುರ್ಗ-18

ಹೊಳಲ್ಕೆರೆ-17