ಜಿಲ್ಲೆ

ಮಳೆಯಿಂದ 11071 ಜನ ನಿರಾಶ್ರಿತ

Gadag

ಮೃತ್ಯುಂಜಯ ಕಲ್ಮಠ ಗದಗ

ಸತತವಾಗಿ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಜನಜೀವನಕ್ಕೆ ತೀರಾ ಸಮಸ್ಯೆ ಉಂಟಾಗಿದ್ದು, ಬೆಳೆಗಳ ಜತೆಗೆ ಮನೆಗಳಿಗೂ ಹಾನಿಯಾಗಿದ್ದರಿಂದ ಸೂರು ಕಳೆದುಕೊಂಡವರ ಸ್ಥಿತಿ ಅಯೋಮಯವಾಗಿದ್ದರೆ, ಏಳು ಜನರು ಪ್ರಾಣ ಕಳೆದುಕೊಂಡಿದ್ದಾರೆ.

ಜಿಲ್ಲೆಯಲ್ಲಿ ಜು. 1ರಿಂದ ಸೆ. 9ರವರೆಗೆ ಒಟ್ಟು ಪೂರ್ಣ ಹಾನಿ, ಗಂಭೀರ ಹಾನಿ ಹಾಗೂ ಭಾಗಶಃ ಹಾನಿ ಸೇರಿ 945 ಮನೆಗಳಿಗೆ ಹಾನಿ ಉಂಟಾಗಿದೆ. ಇದರಲ್ಲಿ ಗದಗ ತಾಲೂಕಿನಲ್ಲಿ ಅತಿ ಹೆಚ್ಚು 324 ಮನೆಗಳಿಗೆ ಹಾನಿಯಾಗಿದೆ.

ಮಳೆಯಿಂದ ಉಕ್ಕಿ ಹರಿದ ಹಳ್ಳ ದಾಟುವ ಸಂದರ್ಭದಲ್ಲಿ ಮುಂಡರಗಿ ಪೊಲೀಸ್ ಠಾಣೆಯ ಕಾನ್​ಸ್ಟೆಬಲ್​ಗಳಾದ ಹಮ್ಮಿಗಿ ಗ್ರಾಮದ ಮಹೇಶ ವಕ್ರದ ಮತ್ತು ನಾಗರಹಳ್ಳಿ ಗ್ರಾಮದ ನಿಂಗಪ್ಪ ಹಲವಾಗಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾರೆ. ಮುಂಡರಗಿ ತಾಲೂಕಿನ ಹಳ್ಳಿಕೇರಿ ಗ್ರಾಮದ ನಾಗಮ್ಮ ಎಂಬುವರು ಕಾಲು ಜಾರಿ ಹಳ್ಳಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಮುಂಡರಗಿ ತಾಲೂಕಿನ ನಾಲ್ವರು, ರೋಣ ತಾಲೂಕಿನ ಒಬ್ಬರು, ನರಗುಂದ ತಾಲೂಕಿನ ಇಬ್ಬರು ಸೇರಿ ಏಳು ಜನರು ಬಲಿಯಾಗಿದ್ದಾರೆ. ಏಳು ಜನರಲ್ಲಿ ಮೂವರು ನೀರಿನಲ್ಲಿ ಕೊಚ್ಚಿ ಹೋಗಿರುವುದು, ಇಬ್ಬರಿಗೆ ಸಿಡಿಲು ಬಡಿತ, ಇಬ್ಬರು ಮನೆ ಕುಸಿದು ಮೃತಪಟ್ಟಿದ್ದಾರೆ.

ಮಳೆಯಿಂದ ನಿರಾಶ್ರಿತರಾಗಿರುವ ಜನರಿಗೆ ಕಾಳಜಿ ಕೇಂದ್ರ ಆರಂಭಿಸಲಾಗಿದೆ. ಗದಗ ತಾಲೂಕಿನಲ್ಲಿ 10, ಗಜೇಂದ್ರಗಡ 1, ಲಕ್ಷೆ್ಮೕಶ್ವರ 4, ನರಗುಂದ 3, ರೋಣ 2, ಶಿರಹಟ್ಟಿ ತಾಲೂಕಿನ 3 ಸೇರಿ ಒಟ್ಟು ಜಿಲ್ಲೆಯಲ್ಲಿ 23 ಕೇಂದ್ರ ತೆರೆಯಲಾಗಿದೆ. ಗದಗ ತಾಲೂಕಿನಲ್ಲಿ 8739, ಗಜೇಂದ್ರಗಡ 100, ಲಕ್ಷೆ್ಮೕಶ್ವರ 1145, ನರಗುಂದ 385, ರೋಣ 302, ಶಿರಹಟ್ಟಿ ತಾಲೂಕಿನಲ್ಲಿ 409 ಜನ ಸೇರಿ 23 ಕಾಳಜಿ ಕೇಂದ್ರಗಳಲ್ಲಿ 11071 ನಿರಾಶ್ರಿತರಿದ್ದಾರೆ. ಕಾಳಜಿ ಕೇಂದ್ರಕ್ಕೆ ಒಟ್ಟು 6.25 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ.

ಇಲ್ಲಿವರೆಗೆ ಜಿಲ್ಲೆಯಲ್ಲಿ 945 ಮನೆಗಳು ಹಾಳಾಗಿರುವ ಕುರಿತು ವರದಿಯಾಗಿದೆ. ಇದರಲ್ಲಿ 656 ಮನೆಗಳಿಗೆ ಈಗಾಗಲೇ ಪರಿಹಾರ ಪಾವತಿಸಲಾಗಿದೆ. ಉಳಿದ ಮನೆಗಳ ಪರಿಶೀಲನೆ ಮುಂದುವರಿದಿದೆ. ಪರಿಶೀಲನೆಯಾಗಿರುವ ಮನೆಗಳನ್ನು ತಹಸೀಲ್ದಾರ್ ಲಾಗಿನ್​ನಲ್ಲಿ ಎಂಟ್ರಿ ಮಾಡುವ ಕಾರ್ಯ ಭರದಿಂದ ಸಾಗಿದೆ. ಎನ್​ಡಿಆರ್​ಎಫ್ ಮಾರ್ಗಸೂಚಿಯನ್ವಯ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ವಿವರಿಸುತ್ತಾರೆ.

ಕೃಷಿ ಬೆಳೆಗಳು, ಮಾನವ ಹಾನಿ ಜತೆಗೆ ಜಾನುವಾರುಗಳಿಗೂ ವರುಣ ಕಂಟಕವಾಗಿ ಕಾಡಿದೆ. ಜಿಲ್ಲೆಯ ಗದಗ ತಾಲೂಕಿನಲ್ಲಿ 43, ಗಜೇಂದ್ರಗಡ ತಾಲೂಕು 3, ಮುಂಡರಗಿ ತಾಲೂಕು 1, ರೋಣ ತಾಲೂಕು 3 ಮತ್ತು ಶಿರಹಟ್ಟಿ ತಾಲೂಕಿನ 9 ಸೇರಿ ಒಟ್ಟು 59 ಜಾನುವಾರುಗಳು ಸಾವನ್ನಪ್ಪಿವೆ, ಇದರಲ್ಲಿ 51 ದೊಡ್ಡ ಜಾನುವಾರುಗಳು, 9 ಚಿಕ್ಕ ಜಾನುವಾರುಗಳಿವೆ. ಇಲ್ಲಿವರೆಗೆ ಗಜೇಂದ್ರಗಡ ತಾಲೂಕಿನಲ್ಲಿ 55 ಸಾವಿರ ರೂಪಾಯಿ, ರೋಣ ತಾಲೂಕಿನಲ್ಲಿ 30 ಸಾವಿರ ರೂಪಾಯಿ ಮತ್ತು ಮುಂಡರಗಿ ತಾಲೂಕಿನಲ್ಲಿ 30 ಸಾವಿರ ರೂಪಾಯಿ ಪರಿಹಾರ ಅನ್ನು ಜಾನುವಾರುಗಳ ಮಾಲೀಕರಿಗೆ ವಿತರಿಸಲಾಗಿದೆ. ಗದಗ ತಾಲೂಕಿನಲ್ಲಿ ಮೃತಪಟ್ಟ ಜಾನುವಾರುಗಳ ಮಾಲೀಕರಿಗೆ ಪರಿಹಾರ ನೀಡಬೇಕಿದೆ.

174 ಶಾಲಾ ಕಟ್ಟಡಕ್ಕೆ ಧಕ್ಕೆ: ಸತತ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳು, ಅಂಗನವಾಡಿ ಕೇಂದ್ರಗಳು ಸಹ ಹಾನಿಗೀಡಾಗಿವೆ. ಜಿಲ್ಲೆಯಲ್ಲಿ ಒಟ್ಟು 174 ಪ್ರಾಥಮಿಕ ಶಾಲೆಗಳು ಮತ್ತು 122 ಅಂಗನವಾಡಿ ಕೇಂದ್ರಗಳಿಗೆ ಕಟ್ಟಡಗಳಿಗೆ ಹಾನಿಯುಂಟಾಗಿದೆ. ಪ್ರಾಥಮಿಕ ಶಾಲೆಗಳು 5.06 ಕೋಟಿ ರೂ. ಮತ್ತು ಅಂಗನವಾಡಿಗಳ 2.44 ಕೋಟಿ ರೂ. ಮೊತ್ತದ ಕಟ್ಟಡಗಳು ಹಾನಿಗೀಡಾಗಿವೆ.