ಯಗಚಿ ಜಲಾಶಯದ ಐದು ಕ್ರಸ್ಟ್‌ಗೇಟ್‌ಗಳ ಮೂಲಕ ನದಿಗೆ ನೀರು ಬಿಟ್ಟಿರುವುದು. 
ಜಿಲ್ಲೆ

ಯಗಚಿಯಿಂದ 1,100 ಕ್ಯೂಸೆಕ್ ನೀರು ಬಿಡುಗಡೆ

ಲೋಕೇಶ್ ಮನು. ಡಿ

ಬೇಲೂರು: ಮಲೆನಾಡು ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೇಲೂರಿನ ಯಗಚಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿ ಜಲಾಶಯ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ ಜಲಾಶಯದ ಐದು ಕ್ರಸ್ಟ್‌ಗೇಟ್‌ಗಳ ಮೂಲಕ ನದಿ ಹಾಗೂ ಎಡದಂಡೆ ನಾಲೆಗೆ ನಿರಂತರವಾಗಿ ನೀರು ಬಿಡಲಾಗಿದೆ.

ಈ ಬಾರಿ ಉತ್ತಮ ಮಳೆಯಿಂದಾಗಿ ಪಟ್ಟಣ ಸಮೀಪದ ಯಗಚಿ ಜಲಾಶಯ ಭರ್ತಿಯಾಗಿದ್ದು, ತಿಂಗಳಿಂದ ಕ್ರಸ್ಟ್‌ಗೇಟ್‌ಗಳ ಮೂಲಕ ಸಣ್ಣ ಪ್ರಮಾಣದಲ್ಲಿ ನೀರು ಹರಿಯುತ್ತಿತ್ತು. ಮಲೆನಾಡು ಭಾಗದಲ್ಲಿ ಬಿಟ್ಟೂ ಬಿಟ್ಟು ಬರುತ್ತಿದ್ದ ಮಳೆ ಕೆಲ ದಿನಗಳಿಂದ ಬಿಡುವಿಲ್ಲದೆ ಸುರಿಯುತ್ತಿರುವ ಕಾರಣ ಆ ಭಾಗದ ಕೆರೆ-ಕಟ್ಟೆಗಳು, ಹಳ್ಳ-ಕೊಳ್ಳ ತುಂಬಿದ್ದರಿಂದ ಜಲಾಶಯಕ್ಕೆ ಹೆಚ್ಚು ನೀರು ಹರಿದುಬರುತ್ತಿದೆ.

ಇದರಿಂದ ಯಗಚಿ ಜಲಾಶಯ ಭರ್ತಿಯಾಗಿದೆ. ಮಂಗಳವಾರ 1,124 ಕ್ಯೂಸೆಕ್ ನಷ್ಟು ನೀರು ಜಲಾಶಯಕ್ಕೆ ಹರಿದು ಬರುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜಲಾಶಯದಿಂದ ನದಿಗೆ ಮೂಲಕ 1000 ಕ್ಯೂಸೆಕ್, ಎಡದಂಡೆ ನಾಲೆ ಮೂಲಕ 100 ಕ್ಯೂಸೆಕ್ ನೀರನ್ನು ಬಿಡಲಾಗಿದೆ. ನದಿ ಪಾತ್ರದ ಹಾಗೂ ನಾಲೆ ಅಕ್ಕಪಕ್ಕದ ಜನರು ಎಚ್ಚರಿಕೆ ವಹಿಸಬೇಕಿದೆ.