ಬೀದರ್: ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಆಯೋಜಿಸಿದ್ದ ಕ್ಯಾಂಪಸ್ ಸಂದರ್ಶನದಲ್ಲಿ 110 ಡಿಪ್ಲೊಮಾ ಮತ್ತು ಐಟಿಐ ವಿದ್ಯಾರ್ಥಿಗಳು ವಿವಿಧ ಕಂಪನಿಗಳಲ್ಲಿ ಉದ್ಯೋಗಕ್ಕೆ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಟೊಯೋಟೊ, ಪುಣೆಯ ಫ್ಲಾಶ್, ಹೈದರಾಬಾದ್ ನ ಶ್ರೀರಾಮಲು ಕಂಪನಿಗಳು ನಡೆಸಿದ ಸಂದರ್ಶನಕ್ಕೆ ಜಿಲ್ಲೆಯ ವಿವಿಧೆಡೆಯ 300ಕ್ಕೂ ಅಧಿಕ ವಿವಿಧ ವೃತ್ತಿಯ ಐಟಿಐ ಮತ್ತು ಡಿಪ್ಲೊಮಾ ತರಬೇತಿದಾರರು ಆಗಮಿಸಿದ್ದರು. ನಾನಾ ಹಂತದ ಸಂದರ್ಶನದ ನಂತರ ಅಂತಿಮವಾಗಿ ನೌಕರಿ ಪಡೆದ ಡಿಪ್ಲೊಮಾದ 95, ಐಟಿಐ 15 ಸೇರಿ 110 ಅಭ್ಯರ್ಥಿಗಳಿಗೆ ಉದ್ಯೋಗ ದೃಢೀಕರಣ ಪತ್ರ ನೀಡಲಾಯಿತು.
ಟೊಯೋಟೊ ಕಂಪನಿ ಅಧಿಕಾರಿ ಬ್ರಿಗೇಸ್ ಎಸ್.ಕಾಂಬ್ಳೆ ಮಾತನಾಡಿ, ನಮ್ಮ ಕಂಪನಿಗೆ ಆಯ್ಕೆಯಾದ ಡಿಪ್ಲೊಮಾದವರಿಗೆ ಮಾಸಿಕ 22 ಸಾವಿರ ರೂ. ಮತ್ತು ಐಟಿಐ ವಿದ್ಯಾರ್ಥಿಗಳಿಗೆ 15 ಸಾವಿರ ರೂ. ವೇತನ ನೀಡಲಾಗುವುದು ಎಂದು ಹೇಳಿದರು.
ಫ್ಲ್ಯಾಶ್ ಕಂಪನಿ ಮಾನವ ಸಂಪನ್ಮೂಲ ಅಧಿಕಾರಿ ವರುಣ್ಸಿಂಗ್ ಮಾತನಾಡಿ, ನಮ್ಮಲ್ಲೂ ಟೊಯೋಟೊ ಕಂಪನಿ ಮಾದರಿಯಲ್ಲಿ ವೇತನ ನೀಡಲಾಗುವುದು. ಆಯ್ಕೆಯಾದ ಕುಶಲಕರ್ಮಿಗಳ ಕಾರ್ಯವೈಖರಿ ನೋಡಿ ಕಾಯಂ ಮಾಡಲಾಗುವುದು ಎಂದರು.
ಪಾಲಿಟೆಕ್ನಿಕ್ ಕಾಲೇಜು ಪ್ರಾಚಾರ್ಯ ಮಲ್ಲಿಕಾರ್ಜುನ ಬಿ.ಆರ್. ಮಾತನಾಡಿ, ಕಲಿಕೆ ಜತೆಗೆ ಉದ್ಯೋಗ ನೀಡುವ ಕಾರ್ಯ ನಮ್ಮದಾಗಲಿ. ಮಕ್ಕಳಿಗೆ ಶಿಕ್ಷಣ ಕಲಿಸಿ ಪ್ರಮಾಣಪತ್ರ ಕೊಟ್ಟು ಕಳುಹಿಸುವುದಕ್ಕಿಂತ ಕೈಗೆ ಉದ್ಯೋಗ ಪತ್ರ ಕೊಟ್ಟು ಕಳುಹಿಸುವ ಉದ್ದೇಶದಿಂದ ಸಂದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕೋಶಾಧ್ಯಕ್ಷ ಶಿವಶಂಕರ ಟೋಕರೆ ಮಾತನಾಡಿ, ನಮ್ಮಲ್ಲಿ ಕೈಗಾರಿಕೆಗಳು ಇರದ ಕಾರಣ ಯುವಕರಲ್ಲಿ ಕೌಶಲ ಇದ್ದರೂ ನೌಕರಿ ಸಿಗುತ್ತಿಲ್ಲ. ಐಟಿಐ ಮತ್ತು ಡಿಪ್ಲೊಮಾ ಕಾಲೇಜಿನಿಂದ ನಿರಂತರ ಕ್ಯಾಂಪಸ್ ಸಂದರ್ಶನ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.
ಶಿರಾಜುದ್ದೀನ್ ಇತರರಿದ್ದರು. ಮಹೇಶ ಶೆಗೆದಾರ ಸ್ವಾಗತಿಸಿದರು. ಅರುಣ್ ಮುಕಾಸಿ ನಿರೂಪಣೆ ಮಾಡಿದರು. ನಾಗರಾಜ ವಂದಿಸಿದರು.