ಕೆ.ಆರ್.ಸಾಗರ: ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಕಳೆದೆರಡು ದಿನಗಳಿಂದ ಮಳೆ ಪ್ರಮಾಣ ಕ್ಷೀಣಿಸಿದ್ದು, ಕೆ.ಆರ್.ಸಾಗರ ಅಣೆಕಟ್ಟೆಗೆ ಒಳಹರಿವಿನ ಪ್ರಮಾಣ ಕಡಿಮೆಯಾಗಿದೆ. ಗುರುವಾರ ಸಂಜೆ ವೇಳೆಗೆ 39 ಸಾವಿರ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ನೀರಿನ ಮಟ್ಟ 110 ಅಡಿ ತಲುಪಿದೆ.
ಗರಿಷ್ಠ 49.452 ಟಿಎಂಸಿ ನೀರಿನ ಸಂಗ್ರಹ ಸಾಮರ್ಥ್ಯ ಇರುವ ಅಣೆಕಟ್ಟೆಯಲ್ಲಿ ಪ್ರಸ್ತುತ 30.50 ಟಿಎಂಸಿ ನೀರಿನ ಸಂಗ್ರಹವಿದೆ. ನದಿ ಪಾತ್ರದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಜಲಾಶಯಕ್ಕೆ 52000 ಕ್ಯೂಸೆಕ್‌ವರೆಗೂ ನೀರು ಹರಿದು ಬರುತ್ತಿತ್ತು. ಈಗ ಆ ಪ್ರಮಾಣ ಇಳಿಮುಖವಾಗಿದೆ. ಬುಧವಾರ ಬೆಳಗ್ಗೆ 51 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿತ್ತು. ಅದೇ ದಿನ ಸಂಜೆ ವೇಳೆಗೆ 40 ಸಾವಿರ ಕ್ಯುಸೆಕ್ ನೀರು ಹರಿದಿತ್ತು. ಗುರುವಾರ ಬೆಳಗ್ಗೆಯೂ 40 ಸಾವಿರ ಕ್ಯುಸೆಕ್ ಹರಿಯುತ್ತಿತ್ತು. ಅದರೆ ಸಂಜೆ ವೇಳೆಗೆ 39 ಸಾವಿರ ಕ್ಯುಸೆಕ್‌ಗೆ ಇಳಿದಿದೆ. ಕಳೆದ ವರ್ಷ ಇದೇ ದಿನ ಅಣಕಟ್ಟೆ ಸಂಪೂರ್ಣ ಭರ್ತಿಯಾಗಿ 124.80 ಅಡಿ ತಲುಪಿತ್ತು.