ಜಿಲ್ಲೆ

110 ಕೆ.ವಿ. ಸಬ್‌ಸ್ಟೇಷನ್ ಕಾಮಗಾರಿ ವಿಳಂಬ : ಸಮಸ್ಯೆಯಿಂದ ರೋಸಿಹೋದ ಜನತೆ : ನ.ಪಂ. ಸಭೆಯಲ್ಲಿ ಸದಸ್ಯರ ಆಕ್ರೋಶ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಸುಳ್ಯ

ಸುಳ್ಯದ ವಿದ್ಯುತ್ ಸಮಸ್ಯೆಯಿಂದ ಜನರು ರೋಸಿ ಹೋಗಿದ್ದಾರೆ. ಹಲವು ದಶಕಗಳಿಂದ ಜನರು ಅನುಭವಿಸುತ್ತಿರುವ ವಿದ್ಯುತ್ ಸಮಸ್ಯೆ ಪರಿಹಾರ ಆಗದ ಬಗ್ಗೆ ನಗರ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಸುಳ್ಯದಲ್ಲಿ ಅನುಷ್ಠಾನವಾಗುತ್ತಿರುವ 110 ಕೆ.ವಿ. ಸಬ್‌ಸ್ಟೇಷನ್ ಕಾಮಗಾರಿ ವಿಳಂಬವಾಗಿರುವುದಕ್ಕೆ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ನ.ಪಂ. ಅಧ್ಯಕ್ಷೆ ಶಶಿಕಲಾ ಎ. ನೀರಬಿದಿರೆ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.

ಸುಳ್ಯದ 110 ಕೆ.ವಿ.ವಿದ್ಯುತ್ ಕಾಮಗಾರಿ ಪೂರ್ತಿ ಆಗದಿರುವ ಬಗ್ಗೆ ಸದಸ್ಯರು ಪ್ರಶ್ನಿಸಿದಾಗ ಈ ಕುರಿತು ಚರ್ಚೆ ನಡೆಯಿತು. ಶಾಸಕರು ಹಾಗೂ ಮೆಸ್ಕಾಂ, ಕೆಪಿಟಿಸಿಎಲ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಭೆ ನಡೆಸುವ ಕುರಿತು ಅಧ್ಯಕ್ಷರು ಭರವಸೆ ನೀಡಿದರು.

ನಗರ ಪಂಚಾಯಿತಿ ಉಪಾಧ್ಯಕ್ಷ ಬುದ್ಧ ನಾಯ್ಕ, ಸ್ಥಾಯಿ ಸಮಿತಿ ಅಧ್ಯಕ್ಷೆ ಕಿಶೋರಿ ಶೇಟ್, ಮುಖ್ಯಾಧಿಕಾರಿ ಸುಧಾಕರ್, ಪಂಚಾಯಿತಿ ಸದಸ್ಯರಾದ ಸರೋಜಿನಿ ಪೆಲ್ತಡ್ಕ, ಎಂ.ವೆಂಕಪ್ಪ ಗೌಡ, ಡೇವಿಡ್ ಧೀರಾ ಕ್ರಾಸ್ತ, ಬಾಲಕೃಷ್ಟ ಭಟ್ ಕೊಡೆಂಕಿರಿ, ಉಮ್ಮರ್ ಕೆ.ಎಸ್., ಶರೀಫ್ ಕಂಠಿ, ರಿಯಾಜ್ ಕಟ್ಟೆಕಾರ್, ಬಾಲಕೃಷ್ಣ ರೈ ದುಗಲಡ್ಕ, ನಾರಾಯಣ ಶಾಂತಿನಗರ, ಪೂಜಿತಾ ಕೆ.ಯು., ಸುಧಾಕರ ಕುರುಂಜಿಭಾಗ್, ಸುಶೀಲಾ ಜಿನ್ನಪ್ಪ, ಶೀಲಾ ಕುರುಂಜಿ, ಸರೋಜಿನಿ ಪೆಲ್ತಡ್ಕ, ನಾಮನಿರ್ದೇಶಿತ ಸದಸ್ಯರಾದ ರಾಜು ಪಂಡಿತ್, ಭಾಸ್ಕರ ಪೂಜಾರಿ ದುಗಲಡ್ಕ ಉಪಸ್ಥಿತರಿದ್ದರು.

ಸಮಸ್ಯೆ ಪರಿಹರಿಸಲು ಒತ್ತಾಯ

ಅಮೃತ್ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಪೈಪ್ ಅಳವಡಿಸಲು ರಸ್ತೆ ಕಡಿದು ಹಾಕಿರುವುದು, ಕಾಂಕ್ರೀಟ್, ಇಂಟರ್‌ಲಾಕ್ ತೆಗೆದಿರುವುದನ್ನು ಕೂಡಲೇ ಪೂರ್ವ ಸ್ಥಿತಿಗೆ ತರಲು ಕ್ರಮ ಕೈಗೊಳ್ಳಬೇಕು. ಚರಂಡಿ ರಿಪೇರಿ, ಕಾಡು ಕಡಿಯುವುದು ಮತ್ತಿತರ ಮಳೆಗಾಲಕ್ಕೆ ಸಿದ್ಧತೆಗಾಗಿ ವಾರ್ಡ್‌ಗಳಿಗೆ ಇರಿಸಿದ ಅನುದಾನ ಹೆಚ್ಚಿಸಬೇಕು. ಕೂಡಲೇ ಟೆಂಡರ್ ಕರೆದು ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಸದಸ್ಯರು ಒತ್ತಾಯಿಸಿದರು.

ಪಕ್ಷ ಭೇದ ಮರೆತು ಧ್ವನಿ ಎತ್ತಿದ ಸದಸ್ಯರು!

110 ಕೆ.ವಿ.ಸಬ್‌ಸ್ಟೇಷನ್ ಸಮಸ್ಯೆಯ ಬಗ್ಗೆ ಶಾಸಕರು, ಸಂಸದರ ಉಪಸ್ಥಿತಿಯಲ್ಲಿ ಸಭೆ ನಡೆಸಿ ಎಂದು ವೆಂಕಪ್ಪ ಗೌಡ ಆಗ್ರಹಿಸಿದರು. ಅಧ್ಯಕ್ಷೆ ಶಶಿಕಲಾ ಮಾತನಾಡಿ, ಈ ಕುರಿತು ಈಗಾಗಲೇ ಶಾಸಕರ ಜತೆ ಮಾತನಾಡಿದ್ದು, ಅವರು ಸಭೆಗೆ ಬರುವುದಾಗಿ ಒಪ್ಪಿದ್ದಾರೆ. ಮುಂದಿನ ಸಭೆಗೆ ಅವರನ್ನು ಬರುವಂತೆ ಕೇಳುತ್ತೇವೆ. ಸಂಬಂಧಿಸಿದ ಅಧಿಕಾರಿಗಳನ್ನು ಕರೆಯುತ್ತೇವೆ ಎಂದು ಭರವಸೆ ನೀಡಿದರು. ವಿದ್ಯುತ್ ಸಮಸ್ಯೆ ಕುರಿತು ಸದಸ್ಯರು ಪಕ್ಷ ಭೇದ ಮರೆತು ಧ್ವನಿ ಎತ್ತಿದರು.