ಮೈಸೂರು: ಕಿಡ್ನಾಪ್ ಮಾಡಿದ್ದ 11 ದಿನದ ಹೆಣ್ಣು ಶಿಶುವನ್ನು ಕೇವಲ 8 ಗಂಟೆಯೊಳಗೆ ಪತ್ತೆ ಮಾಡಿ ಸುರಕ್ಷಿತವಾಗಿ ತಾಯಿ ಮಡಿಲಿಗೆ ಪೊಲೀಸರು ಸೇರಿಸಿದ್ದಾರೆ. ಮಂಡ್ಯ ಮೂಲದ ಮಹಿಳೆಯನ್ನು ನಗರದ ಕುಂಬಾರಕೊಪ್ಪಲಿನಲ್ಲಿ ಬಂಧಿಸಿದ್ದಾರೆ.
ಘಟನೆ ವಿವರ: ನಗರದ ಚೆಲುವಾಂಬ ಆಸ್ಪತ್ರೆಯಲ್ಲಿ ವಸುಮತಿ ಎಂಬವರಿಗೆ ಹೆರಿಗೆಯಾಗಿತ್ತು. ವಾರ್ಡ್‌ನಲ್ಲಿ ತಾಯಿ ಮತ್ತು ಮಗು ಇದ್ದರು. ಆರೋಪಿ ಮಹಿಳೆ ‘ನನ್ನ ಸೋದರಿಗೆ ಇಲ್ಲೇ ಹೆರಿಗೆಯಾಗಿದೆ’ ಎಂದು ಪರಿಚಯ ಮಾಡಿಕೊಂಡು ಆಸ್ಪತ್ರೆಯಲ್ಲಿದ್ದಳು.
ಮಾ.17ರ ಬೆಳಗ್ಗೆ 11ರ ಹೊತ್ತಿನಲ್ಲಿ ತಂದೆ ಪ್ರೇಮ್ ಮಗುವನ್ನು ಸ್ಕ್ಯಾನಿಂಗ್ ಕೊಠಡಿ ಬಳಿಗೆ ಎತ್ತಿಕೊಂಡು ಹೋಗಿದ್ದರು. ‘ಇಲ್ಲಿ ಗಂಡಸರಿಗೆ ಪ್ರವೇಶ ಇಲ್ಲ’ ಎಂದು ಹೇಳಿ ನಂಬಿಸಿ ಮಗುವನ್ನು ಪಡೆದ ಮಹಿಳೆ ಪರಾರಿಯಾಗಿದ್ದಳು. ನಂತರ ಪ್ರೇಮ್ ಹಾಗೂ ಆಸ್ಪತ್ರೆ ಸಿಬ್ಬಂದಿ ಮಗುವನ್ನು ಎಲ್ಲ ಕಡೆ ಹುಡುಕಿದರೂ ಸಿಗದ ಕಾರಣ ದೇವರಾಜ ಠಾಣೆಗೆ ದೂರು ನೀಡಿದ್ದರು.
ಕಾರ್ಯಚರಣೆ ನಡೆಸಿದ ಪೊಲೀಸರು ಆಸ್ಪತ್ರೆಯ ಸಿಸಿ ಕ್ಯಾಮರಾ ಪರಿಶೀಲಿಸಿದರು. ಆಕೆ ಹೋಗಿದ್ದ ಆಟೋರಿಕ್ಷಾ ಪತ್ತೆ ಮಾಡಿದ ಬಳಿಕ, ಆಟೋ ಚಾಲಕನನ್ನು ವಿಚಾರಿಸಿದರು. ಕುಂಬಾರಕೊಪ್ಪಲಿನಲ್ಲಿ ಆಕೆಯಿದ್ದ ಮನೆ ಪತ್ತೆ ಮಾಡಿ ಸಂಜೆ ವೇಳೆ ಮಗುವನ್ನು ತಾಯಿಯ ಮಡಿಲಿಗೆ ಸೇರಿಸಿದ್ದಾರೆ.
ಹಸಿವಿನಿಂದ ಅತ್ತು ನಿತ್ರಾಣಗೊಂಡಿದ್ದ ಮಗು ಕೊನೆಗೂ ತಾಯಿಯ ಮಡಿಲು ಸೇರಿ ನಿರಾಳವಾಯಿತು. ತನಗೆ ಮಕ್ಕಳಿಲ್ಲದ ಕಾರಣ ಈ ಕೃತ್ಯ ಮಾಡಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ದೇವರಾಜ ಠಾಣೆಯ ಇನ್ಸ್‌ಪೆಕ್ಟರ್ ಶಿವಕುಮಾರ್, ಎಸ್‌ಐ ಜಯ ಕೀರ್ತಿ, ಸಿಬ್ಬಂದಿ ಪ್ರವೀಣ್, ಪ್ರದೀಪ್, ಸುರೇಶ್ ಇದ್ದರು.