ಹುಬ್ಬಳ್ಳಿ: ನಗರದ ಘಂಟಿಕೇರಿ ಬಾಲ ಮಂದಿರದ ಆವರಣದಲ್ಲಿ 3.25 ಕೋಟಿ ರೂ. ವೆಚ್ಚದಲ್ಲಿ ನಿರ್ವಣಗೊಳ್ಳಲಿರುವ ಬಾಲಕಿಯರ ನೂತನ ಬಾಲಮಂದಿರದ ಕಾಮಗಾರಿ 11 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.
ನೂತನ ಕಟ್ಟಡ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಕ್ಕಳ ನಿರ್ದೇಶನಾಲಯದ ಅನುದಾನದಲ್ಲಿ ಸುಸಜ್ಜಿತ ಕಟ್ಟಡ ನಿಮಾಣವಾಗಲಿದೆ. 2 ಬ್ಲಾಕ್ಗಳ ಕಟ್ಟಡ ಇದಾಗಿದ್ದು, ಪ್ರತಿ ಬ್ಲಾಕ್ನಲ್ಲಿ 50 ಬಾಲಕಿಯರಿಗೆ ಅವಕಾಶ ಸಿಗಲಿದೆ ಎಂದರು.
ಸಿಆರ್ಎಫ್ ಹಾಗೂ ಸ್ಮಾರ್ಟ್ ಸಿಟಿ ಅಡಿ ರಸ್ತೆ ಅಭಿವೃದ್ಧಿ ಕಾರ್ಯಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕು. ಸಿಆರ್ಎಫ್ ನಿಧಿಯಡಿ ಸರ್ಕಾರದದಿಂದ ಗುತ್ತಿಗೆದಾರರಿಗೆ ಪಾವತಿಯಾಗಬೇಕಾದ ಹಣ ಬಾಕಿ ಇದ್ದು, ಮುಖ್ಯಮಂತ್ರಿ ಗಮನಕ್ಕೆ ತರಲಾಗಿದೆ. ರಾಜ್ಯ ಸರ್ಕಾರ ಅಲ್ಪಾವಧಿ ಸಾಲ ಪಡೆದು ಗುತ್ತಿಗೆದಾರರಿಗೆ ಹಣ ನೀಡಲಿದೆ ಎಂದರು.
ಶಾಸಕ ಪ್ರಸಾದ ಅಬ್ಬಯ್ಯ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಿ.ಎ. ಪಾಟೀಲ, ಲೋಕೋಪಯೋಗಿ ಇಲಾಖೆ ಇಂಜಿನೀಯರ್ ಉದಯಕುಮಾರ, ಬಾಲಮಂದಿರ ಅಧೀಕ್ಷಕಿ ಅತೀಕಾ ಸಿದ್ದಿ ಹಾಗೂ ಇತರರಿದ್ದರು.
ಅಪಘಾತ ತಡೆಗೆ ಕ್ರಮ: ಹುಬ್ಬಳ್ಳಿ ವಿಶ್ವೇಶ್ವರನಗರ ಹಳೇ ಉದ್ಯೋಗ ವಿನಿಮಯ ಕಚೇರಿ ಬಳಿ ಸಂಧಿಸುವ ನಾಲ್ಕು ರಸ್ತೆಗಳಲ್ಲಿ ಸಂಭವಿಸುತ್ತಿರುವ ಅಪಘಾತ ತಡೆಗೆ ಕ್ರಮ ಕೈಗೊಳ್ಳುವುದಾಗಿ ಸಚಿವ ಜಗದೀಶ ಶೆಟ್ಟರ್ ಸ್ಥಳೀಯರಿಗೆ ಭರವಸೆ ನೀಡಿದರು. ಸೋಮವಾರ ಬೆಳಗ್ಗೆ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಚಿವರೊಂದಿಗೆ ಮುಖಾಮುಖಿಯಾದ ಸ್ಥಳೀಯರು ಈ ಭಾಗದ ಸಂಚಾರ ಸಮಸ್ಯೆಯನ್ನು ಗಮನಕ್ಕೆ ತಂದರು. ಒಂದು ಕಡೆ ರಸ್ತೆ ಇಳಿಜಾರಾಗಿದ್ದು ವಾಹನಗಳು ವೇಗವಾಗಿ ಬರುತ್ತವೆ. ವಾಹನಗಳ ವೇಗ ನಿಯಂತ್ರಣಕ್ಕೆ ಯಾವ ರಸ್ತೆಯಲ್ಲೂ ಹಂಪ್ಸ್ಗಳಿಲ್ಲ. ರಸ್ತೆಗಳು ತುಂಬಾ ಹದಗೆಟ್ಟಿವೆ. ಇವೆಲ್ಲ ಕಾರಣಕ್ಕೆ ಪದೇ ಪದೆ ಅಪಘಾತ ಸಂಭವಿಸುತ್ತಿವೆ. ಇಂದೂ ಅಪಘಾತ ಸಂಭವಿಸಿದೆ’ ಎಂದು ಸಚಿವರಿಗೆ ತಿಳಿಸಿದರು. ‘ಸಮಸ್ಯೆ ಅಲಿಸಿದ ಸಚಿವರು, 2 ದಿನಗಳಲ್ಲಿ ರಸ್ತೆ ಸುಧಾರಣೆ ಮಾಡಿಸಿ ಹಂಪ್ಸ್ ಹಾಕಿಸಿ ಅಪಘಾತ ತಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಇಂದು ಅಪಘಾತ ನಡೆದಿರುವುದನ್ನು ಸಚಿವರೇ ನೋಡಿರುವುದರಿಂದ ಸಮಸ್ಯೆ ಪರಿಹರಿಸುತ್ತಾರೆಂಬ ಭರವಸೆ ಇದೆ’ ಎಂದು ಸ್ಥಳೀಯರಾದ ಸಾಕಿರ್ ಸನದಿ ಹೇಳಿದ್ದಾರೆ.
ಪ್ರೌಢಶಾಲೆಗೆ ಕಾಂಪೌಂಡ್ : ವಿಶ್ವೇಶ್ವರ ನಗರದ ಸರ್ಕಾರಿ ಪ್ರೌಢ ಶಾಲೆಯ ಕಾಂಪೌಂಡ್ ನಿರ್ವಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಭೂಮಿಪೂಜೆ ನೆರವೇರಿಸಿದರು. ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಡಿ 10 ಲಕ್ಷ ರೂ. ವೆಚ್ಚದಲ್ಲಿ ಕಾಂಪೌಂಡ್ ನಿರ್ವಿುಸಿ, ಪೇವರ್ಸ್ ಅಳವಡಿಸಲಾಗುವುದು. ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಸಿದ್ದಣ್ಣ ಮೂಗಲಿಶೆಟ್ಟಿ, ಮುಖ್ಯೋಪಾಧ್ಯಾಪಕಿ ಡಿ.ಜಿ. ಕಮ್ಮಾರ ಹಾಗೂ ಇತರರಿದ್ದರು. ಶಾಲೆಗೆ ಸುಸಜ್ಜಿತ ಜಿಮ್ ನಿರ್ವಿುಸಿಕೊಡುವಂತೆ ಶಿಕ್ಷಕರು ಸಚಿವರಿಗೆ ಮನವಿ ಸಲ್ಲಿಸಿದರು. ನಂತರ ಸಚಿವರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಂದಿಗೆ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.