ಜಿಲ್ಲೆ

11 ಜೋಡಿ ಒಂದುಗೂಡಿಸಿದ ಲೋಕ ಅದಾಲತ್

ಚಿತ್ರದುರ್ಗ: ಜಿಲ್ಲಾ ಕೇಂದ್ರದ ನ್ಯಾಯಾಲಯಗಳಲ್ಲಿ ಶನಿವಾರ ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ 11 ಪ್ರತ್ಯೇಕ ಪ್ರಕರಣಗಳಲ್ಲಿ ದಂಪತಿಗಳನ್ನು ಪುನಾ ಒಂದುಗೂಡಿಸಲಾಯಿತು.

ಚಿತ್ರದುರ್ಗದ ಸಿಜೆಎಂನಲ್ಲಿ ಒಂದು, 1ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ಎರಡು ಸೇರಿ ಜಿಲ್ಲೆಯ ವಿವಿಧ ನ್ಯಾಯಾಲಯಗಳಲ್ಲಿ ವೈವಾಹಿಕ ಜೀವನ ಬಿರುಕು ಸಂಬಂಧ ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು. ಇವನ್ನು ವಿಶೇಷವೆಂದು ಪರಿಗಣಿಸಿ ಕೈಗೆತ್ತಿಕೊಳ್ಳಲಾಯಿತು. ಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣಗಳನ್ನು ರಾಜಿ-ಸಂಧಾನದ ಮೂಲಕ ಸುಖಾಂತ್ಯಗೊಳಿಸಲಾಯಿತು.

ಚಿತ್ರದುರ್ಗದ ಅದಾಲತ್‌ನಲ್ಲಿ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಿಂದ ಪ್ರಕರಣಗಳ ಮಾಹಿತಿ ಪಡೆದ ಜಿಲ್ಲಾ ನ್ಯಾಯಾಧೀಶ ರೋಣ ವಾಸುದೇವ್ ಅವರು, ಯಾವ ಕಾರಣಕ್ಕೆ ದೂರವಿದ್ದೀರಿ, ಪರಸ್ಪರ ಹೊಂದಾಣಿಕೆ ಮುಖ್ಯ, ಮಕ್ಕಳ ಭವಿಷ್ಯದ ಕುರಿತು ಗಮನಹರಿಸಿ ಎಂದು ಮನವೊಲಿಸುವ ಮೂಲಕ ಮತ್ತೆ ಒಂದುಗೂಡಿಸುವಲ್ಲಿ ಸಫಲರಾದರು.

ಸೊಂಡೆಕೊಳ ಗ್ರಾಮದ ಕರುಣಾಸಾಗರ್-ಲತಾ, ಹಿರಿಯೂರು ನಗರದ ಮಹಾಲಿಂಗರಾಜು-ಪ್ರತಿಭಾ, ಚಿಕ್ಕಂದವಾಡಿ ಗ್ರಾಮದ ಸ್ವಾಮಿ-ಪ್ರತಿಭಾ ಸೇರಿ ಜಿಲ್ಲಾದ್ಯಂತ ಒಟ್ಟು 11 ಜೋಡಿಗಳು ಮುನಿಸು ಮರೆತು ಪರಸ್ಪರ ಹೂ ಮಾಲೆ ಬದಲಿಸಿಕೊಂಡು, ಸಿಹಿ ತಿನ್ನಿಸುವ ಮೂಲಕ ಜೊತೆ-ಜೊತೆಯಾಗಿ ಬದುಕು ಕಟ್ಟಿಕೊಳ್ಳುವ ಸಂಕಲ್ಪವನ್ನು ನ್ಯಾಯಾಧೀಶರ ಮುಂದೆ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ರೋಣ ವಾಸುದೇವ್ ಮಾತನಾಡಿ, ಕಕ್ಷಿದಾರರು, ವಕೀಲರ ಸಹಕಾರದಿಂದಾಗಿ ಜೋಡಿಗಳು ಒಂದಾಗಲು ಸಾಧ್ಯವಾಗಿದೆ. ಉಳಿದಂತೆ ವಿವಿಧ ರೀತಿಯ 6,014ರ ಪೈಕಿ 4,777 ಪ್ರಕರಣ ಇತ್ಯರ್ಥಪಡಿಸಿ, ಸಂಬಂಧಿಸಿದವರಿಗೆ 21.11 ಕೋಟಿ ರೂ. ಸಂದಾಯವಾಗಲಿದೆ. ಹಿಂದಿನದಕ್ಕಿಂತ ಈ ಬಾರಿಯ ಅದಾಲತ್‌ನಲ್ಲಿ ಹೆಚ್ಚು ಪ್ರಕರಣ ಇತ್ಯರ್ಥವಾಗಿವೆ ಎಂದು ಮಾಹಿತಿ ನೀಡಿದರು.

ನ್ಯಾಯಾಧೀಶರಾದ ಎಂ.ವಿಜಯ್, ಡಿ.ಮಮತಾ, ಎಂ.ಚೈತ್ರಾ, ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ ಇತರರಿದ್ದರು.