ಚಿತ್ರದುರ್ಗ: ಕರ್ನಾಟಕ ಗಣಿ ಪರಿಸರ ಪುನಶ್ಚೇತನ ನಿಗಮ (ಕೆಎಂಇಆರ್‌ಸಿ) ಅನುದಾನದಡಿ ತಾಲೂಕಿನಲ್ಲಿ ವಿವಿಧ ಕಾಮಕಾರಿ ಕೈಗೊಳ್ಳಲು 18 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಹೇಳಿದರು.
ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಒಟ್ಟು 11 ಕೋಟಿ ರೂ. ವೆಚ್ಚದ ಕಾಮಗಾರಿಗಳಿಗೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿದ ನಂತರ ಮಾತನಾಡಿದರು.
ಈ ಅನುದಾನದಡಿ ಸಿದ್ಧಾಪುರ, ಪಂಡರಹಳ್ಳಿ, ಭೀಮಸಮುದ್ರ ಗ್ರಾಮಗಳಲ್ಲಿ ನೂತನ ಆಯುಷ್ಮಾನ್ ಆರೋಗ್ಯ ಉಪಕೇಂದ್ರಗಳನ್ನು ತಲಾ 80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾಗುವುದು. ಏಳೆಂಟು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳಲಿವೆ ಎಂದರು.
ಹಿರೇಗುಂಟನೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಆವರಣದಲ್ಲಿ ವೈದ್ಯಾಧಿಕಾರಿ, ಶುಶ್ರೂಷಕರು ಹಾಗೂ ಗ್ರೂಪ್ ‘ಡಿ’ ನೌಕರರ ವಸತಿ ಗೃಹ ನಿರ್ಮಾಣ ಕಾಮಗಾರಿಗೂ ಇದೇ ವೇಳೆ ಭೂಮಿ ಪೂಜೆ ನೆರವೇರಿಸಿದರು.