ಮದ್ದೂರು ತಾಲೂಕಿನ ಆತಗೂರು ಹೋಬಳಿಯ ಕುಂದನಕುಪ್ಪೆ ಗ್ರಾಮದಲ್ಲಿ ವಿಷಾಹಾರ ಸೇವಿಸಿ 11 ಕುರಿಗಳು ಮೃತಪಟ್ಟಿರುವುದು.  
ಜಿಲ್ಲೆ

ಕುಂದನಕುಪ್ಪೆಯಲ್ಲಿ 11 ಕುರಿಗಳ ಸಾವು

ವಿಷಾಹಾರ, ಕಲುಷಿತ ನೀರು ಸೇವನೆ ಶಂಕೆ

ಮದ್ದೂರು : ತಾಲೂಕಿನ ಆತಗೂರು ಹೋಬಳಿಯ ಕುಂದನಕುಪ್ಪೆ ಗ್ರಾಮದಲ್ಲಿ ಭಾನುವಾರ ವಿಷಾಹಾರ ಸೇವಿಸಿ 11 ಕುರಿಗಳು ಮೃತಪಟ್ಟಿವೆ.

ಗ್ರಾಮದ ರೈತ ಎಲ್.ಮಹೇಶ್ ಅವರಿಗೆ ಸೇರಿದ್ದ ಕುರಿಗಳಾಗಿದ್ದು, ಅವರು ಎಂದಿನಂತೆ ಭಾನುವಾರ ತಮಗೆ ಸೇರಿದ್ದ ಸುಮಾರು 40 ಕುರಿಗಳ ಮಂದೆಯನ್ನು ಗ್ರಾಮದ ಹೊರ ವಲಯದಲ್ಲಿ ಮೇಯಿಸಲು ಕರೆದುಕೊಂಡು ಹೋಗಿದ್ದ ಸಂದರ್ಭದಲ್ಲಿ ವಿಷಾಹಾರ ಅಥವಾ ಕಲುಷಿತ ನೀರನ್ನು ಸೇವನೆ ಮಾಡಿರಬಹುದು ಎನ್ನಲಾಗಿದೆ.

ನಂತರ, ಮನೆಗೆ ಕುರಿಗಳನ್ನು ಕರೆದುಕೊಂಡು ಬಂದಾಗ ಸಂಜೆ 4 ಗಂಟೆಗೆ ಕೆಲ ಕುರಿಗಳು ಮೃತಪಟ್ಟಿವೆ. ಸ್ವಲ್ಪ ಹೊತ್ತಿನ ಬಳಿಕ 7 ಕುರಿಗಳು ಮೃತಪಟ್ಟಿವೆ. ತಕ್ಷಣ ಪಶು ವೈದ್ಯ ಇಲಾಖೆಗೆ ವಿಷಯ ತಿಳಿಸಿದ್ದಾರೆ. ಪಶುವೈದ್ಯೆ ಜ್ಯೋತಿ ಹಾಗೂ ತಂಡ ತಕ್ಷಣ ಸ್ಥಳಕ್ಕೆ ಆಗಮಿಸಿ ಕುರಿಗಳಿಗೆ ಸೂಕ್ತ ಚಿಕಿತ್ಸೆ ನೀಡುವ ಮೂಲಕ ಉಳಿದ ಕುರಿಗಳು ಪ್ರಾಣಪಾಯದಿಂದ ಪಾರು ಮಾಡಿದರು. ಕುರಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ನಮಗೆ 11 ಕುರಿಗಳು ಮೃತಪಟ್ಟಿರುವುದರಿಂದ ಆರ್ಥಿಕವಾಗಿ ತುಂಬ ನಷ್ಟವಾಗಿದೆ. ಸರ್ಕಾರ ಆರ್ಥಿಕ ನೆರವು ನೀಡಬೇಕೆಂದು ರೈತ ಎಲ್.ಮಹೇಶ್ ಮನವಿ ಮಾಡಿದ್ದಾರೆ.