ಜಿಲ್ಲೆ

ಕೆಲಸದ ಆಮಿಷವೊಡ್ಡಿ 11 ಲಕ್ಷ ರೂಪಾಯಿ ಧೋಖಾ

ಬೆಂಗಳೂರು: ರೈಲ್ವೆ ಇಲಾಖೆಯಲ್ಲಿ ಸಿ ಗ್ರೂಪ್ ಹುದ್ದೆಯ ಕೆಲಸ ಕೊಡಿಸುವುದಾಗಿ ಸರ್ಕಾರಿ ನೌಕರನಿಂದ 11 ಲಕ್ಷ ರೂ. ಪಡೆದ ಮೂವರು ವ್ಯಕ್ತಿಗಳು, ಕೆಲಸವನ್ನೂ ಕೊಡಿಸದೆ ಹಣವನ್ನೂ ಹಿಂದಿರುಗಿಸದೆ ವಂಚಿಸಿದ್ದಾರೆ.

ಸರ್ಕಾರಿ ನೌಕರ ಮಂಡ್ಯ ಮೂಲದ ರಾಮಕೃಷ್ಣ ವಂಚನೆಗೊಳಗಾದವರು. ಆರೋಪಿಗಳಾದ ಬಾಬು, ತಿಮ್ಮಯ್ಯ, ಚಮಂತ್ ಸಿಂಗ್ ಎಂಬುವರ ವಿರುದ್ಧ ಕೆಎಸ್​ಆರ್ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ದ್ವಿತೀಯ ಪಿಯುಸಿ ಓದಿರುವ ತಮ್ಮ ಮಗನಿಗೆ ರಾಮಕೃಷ್ಣ ಕೆಲಸ ಹುಡುಕುತ್ತಿದ್ದರು. ಈ ವಿಚಾರವನ್ನು 5 ವರ್ಷಗಳಿಂದ ಪರಿಚಯವಿದ್ದ ತಿಮ್ಮಯ್ಯ ಎಂಬುವರ ಬಳಿ ಹೇಳಿಕೊಂಡಿದ್ದರು. ‘ನನಗೆ ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಬಾಬು ಪರಿಚಯವಿದೆ. ಅವರು ರೈಲ್ವೆಯಲ್ಲಿ ಸಿ ಗ್ರೂಪ್ ಕೆಲಸ ಕೊಡಿಸುತ್ತಾರೆ. ಅದಕ್ಕೆ ಅವರಿಗೆ 7 ಲಕ್ಷ ರೂ. ಕೊಡಬೇಕಾಗುತ್ತದೆ’ ಎಂದು ತಿಮ್ಮಯ್ಯ ಹೇಳಿದ್ದ. 2017 ಜುಲೈನಲ್ಲಿ ರೈಲ್ವೆ ಇಲಾಖೆಯ ಯೂನಿಯನ್ ಕಚೇರಿ ಬಳಿ ರಾಮಕೃಷ್ಣ ಅವರಿಗೆ ಬಾಬು ಎಂಬಾತನನ್ನು ತಿಮ್ಮಯ್ಯ ಪರಿಚಯಿಸಿದ್ದ. ಆಗ ಬಾಬು ‘ನಾನು ರೈಲ್ವೆ ಇಲಾಖೆಯಲ್ಲಿ ಅಡಿಷನಲ್ ಮ್ಯಾನೇಜರ್ ಆಗಿದ್ದು, ಯೂನಿಯನ್​ನಲ್ಲಿ ನಿರ್ದೇಶಕನಾಗಿದ್ದೇನೆ. ನನಗೆ ಹುಬ್ಬಳ್ಳಿ, ದೆಹಲಿ ಹಾಗೂ ರೈಲ್ವೆ ಬೋರ್ಡ್​ನಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಪರಿಚಯವಿದ್ದು, ಸಿ ಗ್ರೂಪ್ ಹುದ್ದೆ ಕೊಡಿಸುತ್ತೇನೆ’ ಎಂದು ಹೇಳಿದ್ದ. ಅದನ್ನು ನಂಬಿದ ರಾಮಕೃಷ್ಣ 2 ಲಕ್ಷ ರೂ. ಮುಂಗಡ ನೀಡಿದ್ದರು. ಒಂದು ವಾರದಲ್ಲಿ ದೆಹಲಿಯಿಂದ ಆರ್ಡರ್ ಕಾಪಿ ತರಿಸುತ್ತೇನೆ ಬಳಿಕ ಬಾಕಿ ಹಣ ಕೊಡಬೇಕು ಎಂದು ಬಾಬು ಡೀಲ್ ಮಾಡಿದ್ದ.

ಹಲವು ತಿಂಗಳು ಕಳೆದರೂ ಆರೋಪಿಗಳು ಯಾವುದೇ ಕೆಲಸ ಕೊಡಿಸದೆ, ಹಣವನ್ನೂ ಹಿಂದಿರುಗಿಸದೆ ‘ಆರ್ಡರ್ ಕಾಪಿ ಬರುತ್ತದೆ ಕಾಯಿರಿ’ ಎಂದು ಕಾಲ ಕಳೆಯುತ್ತಿದ್ದರು. ಆರೋಪಿಗಳ ಮೊಬೈಲ್ ಇದೀಗ ಸ್ವಿಚ್​ಆಫ್ ಆಗಿದೆ ಎಂದು ದೂರಿನಲ್ಲಿ ರಾಮಕೃಷ್ಣ ಉಲ್ಲೇಖಿಸಿದ್ದಾರೆ.

ಬೋರ್ಡ್ ಹೆಸರಲ್ಲಿ ವಂಚನೆ

ರಾಮಕೃಷ್ಣ ಅವರನ್ನು ಯೂನಿಯನ್ ಕಚೇರಿ ಬಳಿ ವಾರದ ಬಳಿಕ ಕರೆಸಿಕೊಂಡ ಆರೋಪಿಗಳು, ರೈಲ್ವೆ ಇಲಾಖೆಯ ಲೆಟರ್​ಹೆಡ್ ಇದ್ದ ಪತ್ರ ತೋರಿಸಿ ಅದರಲ್ಲಿ ಅವರ ಮಗನ ಹೆಸರನ್ನು ಉಲ್ಲೇಖಿಸಿದ್ದರು. ‘ಇದು ದೆಹಲಿಯಿಂದ ಬಂದ ಸೆಲೆಕ್ಷನ್ ಕಾಪಿ ಆಗಿದ್ದು, ರೈಲ್ವೆ ಬೋರ್ಡ್​ನಲ್ಲಿ ಸ್ಯಾಂಕ್ಷನ್ ಆಗಬೇಕು. ಅದಕ್ಕಾಗಿ ರೈಲ್ವೆ ಬೋರ್ಡ್​ಗೆ ಹಣ ಕೊಡಬೇಕು’ ಎಂದು ಹೇಳಿ ಮತ್ತೆ 1.5 ಲಕ್ಷ ರೂ. ಪಡೆದಿದ್ದರು. ಬಳಿಕ ಇದೇ ಮಾದರಿಯಲ್ಲಿ ಹಲವು ನೆಪ ಹೇಳಿ ಹಂತ ಹಂತವಾಗಿ ಒಟ್ಟು 11 ಲಕ್ಷ ರೂ. ಗಳನ್ನು ಪಡೆದಿದ್ದರು.

ಜಿಂಕೆ ಕೊಂಬು ಮಾರಾಟ ಯತ್ನ

ಬೆಂಗಳೂರು: ಜಿಂಕೆ ಕೊಂಬು ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ಕೊಣಂದೂರು ಮೂಲದ ಸುಂದರೇಶ್ (30), ರಾಘವೇಂದ್ರ (23) ಮತ್ತು ಮುತ್ಯಾಲನಗರದ ಮಂಜು (46) ಬಂಧಿತರು. ಜು.29ರಂದು ಆರ್​ಎಂಸಿ ಯಾರ್ಡ್ ಇಆರ್​ಐ ಎಲೆಕ್ಟ್ರಾನಿಕ್ ರಿಲೇಸ್ ಇಂಡಿಯಾ ಕಂಪನಿ ಪಕ್ಕದಲ್ಲಿ ಜಿಂಕೆ ಕೊಂಬು ಮಾರಾಟಕ್ಕೆ ಕೆಲವರು ಗಿರಾಕಿಗಳ ಹುಡುಕಾಟ ನಡೆಸುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಯಿತು. ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಇನೋವಾ ಕಾರಿನಲ್ಲಿ 2 ಜಿಂಕೆ ಕೊಂಬು ಪತ್ತೆಯಾದವು. ಸುಲಭವಾಗಿ ಹಣ ಸಂಪಾದನೆ ಉದ್ದೇಶದಿಂದ ಶಿವಮೊಗ್ಗದಿಂದ ಕೊಂಬು ತಂದು ಮಾರಾಟಕ್ಕೆ ಯತ್ನಿ ಸುತ್ತಿದ್ದರು ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.