ಧಾರವಾಡ ಅವಿಭಿಜಿತ ಜಿಲ್ಲೆಯ ಕರ್ನಾಟಕ ಸೆಂಟ್ರಲ್ ಕೋ ಆಪರೇಟಿವ್ ಬ್ಯಾಂಕ್ ಲಿ.ನ 5 ವರ್ಷಗಳ ಅವಧಿಗೆ ಶನಿವಾರ ಚುನಾವಣೆ ನಡೆಸಲಾಯಿತು.
ನಗರದ ಮುರುಘಾಮಠದ ಶ್ರೀ ಮೃತ್ಯುಂಜಯ ಪ್ರೌಢ ಶಾಲೆಯಲ್ಲಿ ಬೆಳಗ್ಗೆ 10 ಗಂಟೆಯಿಂದ ಆರಂಭವಾದ ಮತದಾನ ಪ್ರಕ್ರಿಯೆ ಸಂಜೆ 4ರವರೆಗೆ ಶಾಂತಿಯುತವಾಗಿ ನಡೆಯಿತು. ಬಳಿಕ ಮತ ಎಣಿಕೆ ಕಾರ್ಯ ನಡೆಸಿ ಫಲಿತಾಂಶ ಘೋಷಣೆ ಮಾಡಲಾಯಿತು.
ಅವಿಭಜಿತ ಧಾರವಾಡ ಜಿಲ್ಲೆ ವ್ಯಾಪ್ತಿ ಹೊಂದಿರುವ ಕೆಸಿಸಿ ಬ್ಯಾಂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಪ್ರತಿ ತಾಲೂಕಿಗೆ ಒಬ್ಬರಂತೆ 17 ಸ್ಥಾನ (ಈ ಪೈಕಿ 3 ಅವಿರೋಧ ಆಯ್ಕೆಯಾಗಿದೆ), ತಾಲೂಕಾ ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ, ಪಟ್ಟಣ ಸಹಕಾರ ಬ್ಯಾಂಕ್ ಹಾಗೂ ಕೃಷಿಯೇತರ ಪತ್ತಿನ ಸಹಕಾರ ಸಂಘ ಮತ್ತು ಇತರೆ ಸಹಕಾರ ಸಂಘಗಳಿಂದ ತಲಾ ಒಂದರಂತೆ ಒಟ್ಟು 20 ಸ್ಥಾನಗಳಿಗೆ ಚುನಾವಣೆ ನಡೆಸಲಾಯಿತು.
ಒಟ್ಟು 20 ಸ್ಥಾನಗಳ ಪೈಕಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವಲಯದ ಕಲಘಟಗಿ, ಗದಗ, ನರಗುಂದ, ಶಿರಹಟ್ಟಿ ತಾಲೂಕಿನ ಕ್ಷೇತ್ರಗಳು, ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳ ಕ್ಷೇತ್ರ ಮತ್ತು ಇತರೆ ಸಹಕಾರ ಕ್ಷೇತ್ರ ಸೇರಿ 6 ಕ್ಷೇತ್ರಗಳ ಕುರಿತು ನ್ಯಾಯಾಲಯದಲ್ಲಿ ಪ್ರಕರಣಗಳಿವೆ. ಹೀಗಾಗಿ ಈ ಕ್ಷೇತ್ರಗಳನ್ನು ಹೊತುಪಡಿಸಿ ಉಳಿದ ಕ್ಷೇತ್ರಗಳ ಫಲಿತಾಂಶ ಘೋಷಣೆ ಮಾಡಲಾಗಿದೆ.
*ಫಲಿತಾಂಶ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಲ್ಲಿ ಧಾರವಾಡ ತಾಲೂಕಿನಿಂದ ಸಿದ್ದಪ್ಪ ಸಪೂರಿ (14 ಮತಗಳು), ನವಲಗುಂದದಿಂದ ನಾಗಪ್ಪ ಬಸಪ್ಪ ಸಂಕದ (24), ರೋಣದಿಂದ ಗದಿಗೆಪ್ಪಗೌಡ ಪರ್ವತಗೌಡ ಪಾಟೀಲ (21), ಹಾವೇರಿಯಿಂದ ಕೊಟ್ರೇಶ ಬಸಗೆಣ್ಣಿ (25), ಬ್ಯಾಡಗಿ ತಾಲೂಕಿನಿಂದ ಚನ್ನಬಸಪ್ಪ ಮಲಕಪ್ಪ ಹುಲ್ಲತ್ತಿ (15), ರಾಣೆಬೆನ್ನೂರನಿಂದ ಮುಳ್ಳಪ್ಪ ಗುರಪ್ಪ ನಿಂಗಜ್ಜನವರ (27), ಹಿರೆಕೆರೂರನಿಂದ ಲಿಂಗರಾಜ ಸದಾಶಿವಪ್ಪ ಚಪ್ಪರದಳ್ಳಿ (25), ಸವಣೂರಿನಿಂದ ಸುಭಾಷ ಮುದಕಪ್ಪ ಗಡೆಪ್ಪನವರ (16), ಶಿಗ್ಗಾಂವನಿಂದ ಸಂಗಮೇಶ್ವರ ರಾಜಶೇಖರಸ್ವಾಮಿ ಕಂಬಾಳಿಮಠ (17), ಹಾನಗಲ್ಲನಿಂದ ಸದಾನಂದ ಅಶೋಕ ಮೆಳ್ಳಿಹಳ್ಳಿ (17) ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ. ಉಳಿದಂತೆ ಶಿವಕುಮಾರಗೌಡ ಪಾಟೀಲ(ಮುಂಡರಗಿ), ಮಲ್ಲಿಕಾರ್ಜುನ ಹೊರಕೇರಿ(ಹುಬ್ಬಳ್ಳಿ), ಯಲ್ಲಪ್ಪ ಹೆಬಸೂರ (ಕುಂದಗೋಳ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಟ್ಟಣ ಸಹಕಾರ ಬ್ಯಾಂಕ್ ಹಾಗೂ ಕೃಷಿಯೇತರ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ನಿಂಗನಗೌಡ ಮುದಿಗೌಡ ಮರಿಗೌಡ್ರ (37) ಆಯ್ಕೆ ಆಗಿದ್ದಾರೆ.
ಚುನಾವಣಾಧಿಕಾರಿಯಾಗಿ ಉಪವಿಭಾಗಾಧಿಕಾರಿ ಶಾಲಂ ಹುಸೇನ ಕಾರ್ಯ ನಿರ್ವಹಿಸಿದರು. ತಹಸೀಲ್ದಾರ ಡಾ.ದೊಡ್ಡಪ್ಪ ಹೂಗಾರ, ಬ್ಯಾಂಕಿನ ಸಿಇಒ ಕೆ.ಮುನಿಯಪ್ಪ, ಪ್ರಧಾನ ವ್ಯವಸ್ಥಾಪಕ ಎಸ್.ವಿ. ಹೂಗಾರ, ಸಹಕಾರ ಸಂಘಗಳ ಉಪ ನಿಬಂಧಕ ನಿಂಗರಾಜ ಬೆಣ್ಣಿ ಸೇರಿ ಇತರರು ಚುನಾವಣೆ ಕರ್ತವ್ಯ ನಿರ್ವಹಿಸಿದರು.
ಮುಗಿಲು ಮುಟ್ಟಿದ ಜಯ ಘೋಷ
ಕೆಸಿಸಿ ಬ್ಯಾಂಕ್ ಅವಿಭಜಿತ ಧಾರವಾಡ ಜಿಲ್ಲೆ ವ್ಯಾಪ್ತಿ ಹೊಂದಿರುವ ಕಾರಣ ಧಾರವಾಡ, ಗದಗ, ಹಾವೇರಿ ಜಿಲ್ಲೆ ಕ್ಷೇತ್ರಗಳ ಅಭ್ಯರ್ಥಿಗಳ ನೂರಾರು ಬೆಂಬಲಿಗರು ನಗರಕ್ಕೆ ಆಗಮಿಸಿದ್ದರು. ಸಂಜೆ ಮತ ಎಣಿಕೆ ಕಾರ್ಯ ಪೂರ್ಣಗೊಂಡು ಫಲಿತಾಂಶ ಹೊರ ಬೀಳುತ್ತಿದ್ದಂತೆ ಮುರುಘಾಮಠ ಆವರಣದಲ್ಲಿ ಬೆಂಬಲಿಗರು ಘೋಷಣೆ ಕೂಗಿ ಸಂಭ್ರಮಿಸಿದರು. ಮತ ಎಣಿಕೆ ಕೇಂದ್ರದಿಂದ ಅಭ್ಯರ್ಥಿಗಳು ಹೊರ ಬರುತ್ತಿದ್ದಂತೆ ಹೆಗಲ ಮೇಲೆ ಹೊತ್ತುಕೊಂಡು ಗುಲಾಲ ಎರಚಿ ವಿಜಯೋತ್ಸವ ಆಚರಿಸಿದರು.