ಬನ್ನೂರು: ಪಟ್ಟಣದ ಪ್ರಾಥಮಿಕ ಸಂಘ 38 ಕುಂಟೆ ಜಾಗವನ್ನು ಮುಖ್ಯ ರಸ್ತೆಯಲ್ಲಿ ಹೊಂದಿದ್ದು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಕ್ರಿಯಾಯೋಜನೆ ರೂಪಿಸಲಾಗುವುದು ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಿ.ಎಸ್.ರವೀಂದ್ರಕುಮಾರ್ ತಿಳಿಸಿದರು.
ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಮಂಗಳವಾರ ನಡೆದ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಈ ಬಾರಿ 11.94 ಲಕ್ಷ ರೂ.ಗಳ ಉತ್ತಮ ಲಾಭಂಶ ಬಂದಿದ್ದು, ಸಹಕಾರ ಸಂಘದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದೆ ಎಂದು ಹೇಳಿದರು.
ನಮ್ಮ ಸಹಕಾರ ಸಂಘದಲ್ಲಿ 3459 ಜನ ಸದಸ್ಯರಿದ್ದು, 339 ಜನರಿಗೆ 41.838 ಲಕ್ಷ ರೂ. ಕೆಸಿಸಿ ಸಾಲ ಮತ್ತು 57.13 ಲಕ್ಷ ರೂ. ವ್ಯಾಪಾರ ಸಾಲ ನೀಡಲಾಗಿದೆ ಎಂದು ಹೇಳಿದರು. ಅಲ್ಲದೇ 713 ಜನರು ಯಶಸ್ವಿ ಯೋಜನೆಯನ್ನು ಪಡೆದುಕೊಂಡಿದ್ದು, ತಾಲೂಕಿನಲ್ಲಿ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವಂತ ಅತ್ಯುತ್ತಮ ಸಂಘ ಎನ್ನುವಂತ ಕೀರ್ತಿಗೆ ಪಾತ್ರವಾಗಿದೆ ಎಂದು ತಿಳಿಸಿದರು.
ರೈತರಿಗೆ ಉತ್ತಮ ಬೀಜ ಮತ್ತು ರಸಗೊಬ್ಬರ ವಿತರಣೆಗೆ ಸಂಬಂಧಿಸಿದಂತೆ ಸರ್ಕಾರದ ನಿಯಮದಂತೆ ಎಲ್ಲ ಆನ್‌ಲೈನ್ ವ್ಯವಹಾರವಾಗಿದ್ದು, ಮುಂದಿನ ದಿನದಲ್ಲಿ ಉತ್ತಮ ರೀತಿಯಲ್ಲಿ ಕೊಡುವಂತಹ ಕೆಲಸ ಆಗುತ್ತದೆ. ಪಶುಸಂಗೋಪನೆ ಸಾಲಕ್ಕೆ ಸಂಬಂಧಿಸಿದಂತೆ ಪಟ್ಟಣದ ಹಾಲಿನ ಡೈರಿಯ ಶಿಫಾರಸ್ಸಿನ ಮೇರೆಗೆ ಮಾತ್ರ ಇಲ್ಲಿ ಸಾಲ ನೀಡುವಂತ ಕಾನೂನು ಇದ್ದು, ಅದಕ್ಕೆ ಸಂಬಂಧಿಸಿದಂತೆ ರೈತರು ಮಾಹಿತಿ ಪಡೆಯುವಂತೆ ತಿಳಿಸಿದರು.
ಸರ್ವ ಸದಸ್ಯರ ಸಮ್ಮತಿಯಂತೆ, ಇಲ್ಲಿ ಪಡಿತರ ಅಂಗಡಿ ತೆರೆಯುವಂತ ವ್ಯವಸ್ಥೆಗೆ ಸಂಬಂಧಿಸಿದವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಸಹಕಾರ ಸಂಘಕ್ಕೆ ಸಂಭಂದಿಸಿದಂತೆ ಏನೇ ವಿಚಾರಗಳಿದ್ದರೂಸರ್ವ ಸದಸ್ಯರ ಆಡಳಿತ ಮಂಡಳಿ ಗಮನಕ್ಕೆ ತಂದು ನಂತರ ತೀರ್ಮಾನ ಕೈಗೊಳ್ಳಲಾಗುವುದು. ಕೃಷಿ ಮತ್ತು ವ್ಯಾಪಾರ ಸಾಲಕ್ಕೆ ಸಂಭಂದಿಸಿದಂತೆ ಅದರದ್ದೇ ಆದಂತ ನಿಯಮವಿದ್ದು, ನಿಯಮಕ್ಕೆ ಬದ್ದವಾಗಿ ಸಾಲ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕಡಿಮೆ ಷೇರು ಹಣ ಪಾವತಿ ಮಾಡಿದಂತ ಸದಸ್ಯರು ನಿಗದಿತ 1200 ರೂ.ಗಳನ್ನು ಪಾವತಿಸಿ ತಮ್ಮ ಸದಸ್ಯತ್ವವನ್ನು ನವೀಕರಣ ಮಾಡಿಕೊಳ್ಳಬೇಕು. ಈಗಾಗಲೇ ಕಡಿಮೆ ಹಣ ಪಾವತಿ ಮಾಡಿರುವವರು ಬಾಕಿ ಮೊತ್ತ ಪಾವತಿಸಿ ಸದಸ್ಯತ್ವ ನವೀಕರಿಸಿಕೊಳ್ಳಬೇಕು. ಸರ್ಕಾರ ನಿಯಮದಂತೆ ಎಲ್ಲ ಸದಸ್ಯರು ಕಡ್ಡಾಯವಾಗಿ ಮೂರು ಸಭೆಗಳಿಗೆ ಹಾಜರಾಗಿ ತಮ್ಮ ಸಹಿ ಮಾಡಿರಬೇಕು, ಅಲ್ಲದೇ ಈ ಸಂಘದಲ್ಲಿ ಕನಿಷ್ಟ 2ಸಾವಿರ ರೂ.ಗಳ ವಹಿವಾಟನ್ನು ನಡೆಸಿರಬೇಕು ಎಂದು ಹೇಳಿದರು.
ಉಪಾಧ್ಯಕ್ಷ ಕುಚೇಲ, ಬಿ.ಎಂ.ಸೋಮಶೇಖರ್, ರಾಮಲಿಂಗೇಗೌಡ, ಲಿಂಗೇಗೌಡ, ನಟರಾಜು, ಗೋವಿಂದರಾಜು, ಚಿಕ್ಕಸ್ವಾಮಿ, ರತ್ನಮ್ಮ, ಸೌಭಾಗ್ಯಾ, ಸುನೀತಾ, ರಾಜಪ್ಪ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೋಭಾ, ಮಂಜುಳಾ, ಭಾಸ್ಕರ್, ಮಂಜುನಾಥ್ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.