ಜಿಲ್ಲೆ

10ನೇ ಚಾಮರಾಜ ಒಡೆಯರ್ ಪುತ್ಥಳಿ ಅನಾವರಣ

ಮೈಸೂರು: ನಗರದ ಚಾಮರಾಜಪುರಂ ಕೃಷ್ಣರಾಜ ಬುಲೇವಾರ್ಡ್ ರಸ್ತೆಯಲ್ಲಿರುವ ಶ್ರೀ ಜಯಚಾಮರಾಜ ಅರಸು ಎಜುಕೇಷನ್ ಟ್ರಸ್ಟ್ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಮೈಸೂರು ಸಂಸ್ಥಾನದ 10ನೇ ಚಾಮರಾಜ ಒಡೆಯರ್ ಅವರ ಪುತ್ಥಳಿಯನ್ನು ಶುಕ್ರವಾರ ಸಂಜೆ ಅನಾವರಣಗೊಳಿಸಲಾಯಿತು.

ರಾಜವಂಶಸ್ಥರೂ ಆಗಿರುವ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ, 10ನೇ ಚಾಮರಾಜ ಒಡೆಯರ್ ಅವರ ಆಡಳಿತ ಅವಧಿಯಲ್ಲಿ ಮೈಸೂರು ಸಾಕಷ್ಟು ಅಭಿವೃದ್ಧಿಯಾಗಿದೆ.

1881ರಲ್ಲಿ ಮೈಸೂರು ಪ್ರತಿನಿಧಿಸಭೆಯನ್ನು ರಚನೆ ಮಾಡಿದ್ದರು. ಇದುವೇ ಭಾರತದ ರಾಜಪ್ರಭುತ್ವದ ಆಳ್ವಿಕೆಯಲ್ಲಿ ಆಧುನಿಕ ಪ್ರಜಾಪ್ರಭುತ್ವದ ಮೊದಲ ಶಾಸಕಾಂಗ ಸಂಸ್ಥೆಯಾಗಿತ್ತು ಎಂದು ಸ್ಮರಿಸಿದರು.

1893ರಲ್ಲಿ ಸ್ವಾಮಿ ವಿವೇಕಾನಂದರ ಅಮೆರಿಕದ ಶಿಕಾಗೋದಲ್ಲಿ ನಡೆಯುತ್ತಿದ್ದ ಸರ್ವಧರ್ಮ ಸಮ್ಮೇಳನಕ್ಕೆ ತೆರಳಲು ಆರ್ಥಿಕ ಸಹಾಯ ವಾಡಿದ್ದರು. ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿ, ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿದ್ದರು. ಶಿಕ್ಷಣ ಕ್ಷೇತ್ರಕ್ಕೆ ಭಾರತೀಯ ಪರಂಪರೆ, ಸಂಸ್ಕೃತಿ ಪರಿಚಯಿಸುವ ನಿಟ್ಟಿನಲ್ಲಿ ಮೈಸೂರು ಸಂಸ್ಥಾನ ಈ ಹಿಂದಿನಿಂದಲೂ ಶ್ರಮಿಸಿದೆ ಎಂದರು.

ಟ್ರಸ್ಟ್‌ನ ಉಪಾಧ್ಯಕ್ಷೆ ಡಾ.ಭಾರತೀ ಶ್ರೀಧರ್‌ರಾಜೆ ಅರಸ್, ಕಾರ್ಯದರ್ಶಿ ಮಹೇಶ್ ಎನ್.ಅರಸ್, ಜಂಟಿ ಕಾರ್ಯದರ್ಶಿ ಸರ್ದಾರ್ ಶ್ರೀಕಂಠರಾಜೇ ಅರಸ್, ತ್ರಿಷಿಕಾ ಒಡೆಯರ್, ಇಂಜಿನಿಯರ್ ಅಮರನಾಥ್‌ರಾಜೇ ಅರಸ್ ಅವರನ್ನು ಸನ್ಮಾನಿಸಲಾಯಿತು. ಟ್ರಸ್ಟ್‌ನ ಪೋಷಕರಾದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ನಿವೃತ್ತ ಸಹ ಪ್ರಾಧ್ಯಾಪಕಿ ಡಾ.ಬಿ.ವಿ.ಸುಧಾಮಣಿ ಇನ್ನಿತರರಿದ್ದರು.