ಜಿಲ್ಲೆ

ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಆಶಾಕಿರಣ, 108ನೇ ಜನ್ಮ ದಿನಾಚರಣೆ

ಬೆಳಗಾವಿ: ರಾಜ್ಯ ಕಂಡ ಧೀಮಂತ ನಾಯಕ ಹೆಮ್ಮೆಯ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರು ಯಾವುದೇ ಜಾತಿ, ಧರ್ಮಭೇದ ಮಾಡದೇ ಸಮಾಜದ ಎಲ್ಲರ ಏಳಿಗೆಗಾಗಿ ಶ್ರಮಿಸಿದರು ಎಂದು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಆಸೀಫ್ ಸೇಠ್ ಹೇಳಿದರು.
 ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮಹಾನರ ಪಾಲಿಕೆಯ ಸಂಯುಕ್ತಾಶ್ರಯದಲ್ಲಿ ನಗರದ ಕುಮಾರ ಗಂಧರ್ವ ಕಲಾಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಡಿ.ದೇವರಾಜ ಅರಸು ಅವರ 108ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 ಯಾವುದೇ ವರ್ಗದ ಮಕ್ಕಳು ಶಿಕ್ಷಣ, ಉದ್ಯೋಗದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಮಕ್ಕಳಿಗೆ ವಸತಿ ನಿಲಯಗಳನ್ನು ಕಲ್ಪಿಸಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ ಕೀರ್ತಿ ದೇವರಾಜ ಅರಸು ಅವರಿಗೆ ಸಲ್ಲುತ್ತದೆ ಎಂದರು.
 ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ಡಿ.ದೇವರಾಜ ಅರಸು ಅವರು ಸಮಾಜದಲ್ಲಿ ಶೋಷಿತ ವರ್ಗ, ಹಿಂದುಳಿದ ವರ್ಗಗಳ ಆಶಾಕಿರಣವಾಗಿ ಜನರ ಸಬಲೀಕರಣದ ದೃಷ್ಟಿಕೋನ ಇಟ್ಟುಕೊಂಡು ಕೆಲಸ ಮಾಡಿದ್ದಾರೆ. ಮೈಸೂರು ರಾಜ್ಯವನ್ನು ಕರ್ನಾಟಕ ರಾಜವನ್ನಾಗಿ ಮರು ನಾಮಕರಣ ಮಾಡುವಲ್ಲಿ ಅವರ ಪಾತ್ರ ಪ್ರಮುಖವಾಗಿತ್ತು ಎಂದರು.
 ಜಿಲ್ಲಾಧಿಕಾರಿ ನಿತೀಶ್ ಪಾಟೀಲ ಮಾತನಾಡಿ, ದೇವರಾಜ ಅರಸು ಅವರು ಶಿಕ್ಷಣದ ಮೂಲಕ ಎಲ್ಲರ ಏಳಿಗೆ ಆಗಬೇಕೆಂಬ ಆಸೆಯನ್ನು ಹೊಂದಿದ್ದರು. ಅವರನ್ನು ಇಡೀ ರಾಜ್ಯ, ದೇಶ ಹೇಗೆ ನೆನಪಿಟ್ಟುಕೊಳ್ಳುತ್ತಿಯೋ ಅದೇ ರೀತಿಯಲ್ಲಿ ಇಂದಿನ ಮಕ್ಕಳು ಸಾಧನೆ ಮಾಡಬೇಕು ಎಂದರು.
 ಕರ್ನಾಟಕ ಬಾಲ ವಿಕಾಸ ಅಕಾಡೆಮಿ ಗೌರವ ಪ್ರಶಸ್ತಿ ಪುರಸ್ಕೃತ ಬಸವರಾಜ ಗಾರ್ಗಿ ವಿಶೇಷ ಉಪನ್ಯಾಸ ನೀಡಿ, ಡಿ. ದೇವರಾಜ ಅರಸು ಅವರ ಜನ್ಮದಿನ ನಮಗೆಲ್ಲ ಸ್ಪೂರ್ತಿಯಾಗಬೇಕು. ಹಿಂದುಳಿದ ವರ್ಗದವರ ಹಾಗೂ ಬಡವರ ಜೀವನೋದ್ಧಾರವಾಗುವಂತಹ ಕೆಲಸ ಮಾಡುವ ಮೂಲಕ ಸಮಾಜಕ್ಕೆ ದೊಡ್ಡ ಕೊಡುಗೆ ನೀಡಿದರು ಎಂದು ಬಣ್ಣಿಸಿದರು. ಡಿಸಿಪಿ ಸ್ನೇಹಾ ಪಿ.ವಿ., ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಸುಪ್ರಿಯಾ ಕಡೇಚೂರ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ವಿವಿಧ ಶಾಲಾ  ಕಾಲೇಜಿನ ಮಕ್ಕಳು ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಡಿ. ದೇವರಾಜ ಅರಸು ಅವರ ಭಾವಚಿತ್ರದ ಭವ್ಯ ಮೆರವಣಿಗೆಗೆ ಜಿಲ್ಲಾಧಿಕಾರಿಗಳ ಆವರಣದಲ್ಲಿ ಚಾಲನೆ ನೀಡಲಾಯಿತು. ಚನ್ನಮ್ಮ ವೃತ್ತದ ಮಾರ್ಗವಾಗಿ ಸಂಚರಿಸಿ ಕುಮಾರ ಗಂಧರ್ವ ರಂಗ ಮಂದಿರಕ್ಕೆ ತಲುಪಿತು.