ಬೆಂಗಳೂರು: ಈ ಹಿಂದೆ ಇದ್ದಂತೆ ಎರಡು ಪಾಳಿಯಲ್ಲಿ ಕಾರ್ಯನಿರ್ವಹಣೆಗೆ ಅವಕಾಶ ಮಾಡಿಕೊಡಬೇಕೆಂದು ಆಗ್ರಹಿಸಿರುವ 108-ಆರೋಗ್ಯ ಕವಚ ಯೋಜನೆಯ ಆ್ಯಂಬುಲೆನ್ಸ್ ನೌಕರರು, ಬೇಡಿಕೆ ಈಡೇರಿಸದಿದ್ದರೆ ಆ.1ರಿಂದ ಮುಷ್ಕರ ಕೈಗೊಳ್ಳುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸುವರ್ಣ ಕರ್ನಾಟಕ ಆರೋಗ್ಯ ಕವಚ (108) ನೌಕರರ ಸಂಘದ ಉಪಾಧ್ಯಕ್ಷ ಪರಮಶಿವ ಮಾತನಾಡಿ, ಯೋಜನೆಯಡಿ 3,500 ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರದ ಆದೇಶಾನುಸಾರ ಈ ಹಿಂದೆ ಇದ್ದ 12 ಗಂಟೆಗಳ ಅವಧಿಯ ಎರಡು ಪಾಳಿಯನ್ನು ರದ್ದುಗೊಳಿಸಿ, ಜನವರಿ 1ರಿಂದ 8 ಗಂಟೆಗಳ ಅವಧಿಯ ಮೂರು ಪಾಳಿ ನಿಗದಿ ಮಾಡಿ ವೇತನ ಕಡಿತ ಮಾಡಲಾಗಿದೆ. ಇದರಿಂದ ಬೆಳಿಗ್ಗೆ 6 ಗಂಟೆ ಮತ್ತು ರಾತ್ರಿ 10 ಗಂಟೆಯ ಪಾಳಿಗೆ ಹಾಜರಾಗುವ ನೌಕರರು ಸಾರಿಗೆ ವ್ಯವಸ್ಥೆಯಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಇನ್ನು ಅವಧಿ ಕಡಿಮೆ ಎಂದು ಹೇಳಿ ವೇತನ ಕಡಿತ ಮಾಡಿರುವುದರಿಂದ ಆರ್ಥಿಕ ಸಮಸ್ಯೆಯೂ ಎದುರಾಗಿದೆ ಎಂದು ಹೇಳಿದರು.
ಯೋಜನೆಯಡಿ ಶೇ.33 ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಜತೆಗೆ ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯೂ ಮೂರು ಪಾಳಿಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಸಾರಿಗೆ ವ್ಯವಸ್ಥೆ ಹಾಗೂ ಮೂಲಸೌಕರ್ಯವನ್ನು ಒದಗಿಸುವ ಜತೆಗೆ ವೇತನ ಹೆಚ್ಚಿಸಬೇಕು. ಅದು ಸಾಧ್ಯವಾಗದಿದ್ದಲ್ಲಿ ಈ ಮೊದಲಿನಂತೆ ಎರಡು ಪಾಳಿಯಲ್ಲಿ ಸಮಯ ನಿಗದಿ ಮಾಡಬೇಕು. ಈ ಬಗ್ಗೆ ಜುಲೈ 31ರೊಳಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದರೆ ಆ.1ರಿಂದ ಕೆಲಸಕ್ಕೆ ಗೈರಾಗುವ ಮೂಲಕ ಮುಷ್ಕರ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.