ಜಿಲ್ಲೆ

108 ಆಂಬುಲೆನ್ಸ್ ಆರೋಗ್ಯ ಇಲಾಖೆ ನಿರ್ವಹಣೆ

ಪಂಕಜ ಕೆ.ಎಂ.

ಬೆಂಗಳೂರು: ರಾಜ್ಯದಲ್ಲಿ 108- ಆಂಬುಲೆನ್ಸ್ ಸೇವೆಯನ್ನು ಖಾಸಗಿ ಹಿಡಿತದಿಂದ ಮುಕ್ತಗೊಳಿಸಿ ಆರೋಗ್ಯ ಇಲಾಖೆಯಿಂದ ನಿರ್ವಹಣೆ ಮಾಡುವ ಪ್ರಸ್ತಾವನೆಗೆ ಅನುಮೋದನೆ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಖಾಸಗಿ ಪಾಲುದಾರರಾದ ಜಿವಿಕೆ-ಇಎಂಆರ್‌ಐ ಸಂಸ್ಥೆಯಿಂದ ನಿರ್ವಹಣೆ ಹಿಂಪಡೆದಿದ್ದು, 108 ಆಂಬುಲೆನ್ಸ್‌ನ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರವನ್ನು ಆರೋಗ್ಯ ಇಲಾಖೆಯ ಅಧೀನಕ್ಕೆ ಒಳಪಡಿಸಲಾಗಿದೆ. ಜಿಲ್ಲಾ ಕಮಾಂಡ್ ಆ್ಯಂಡ್ ಕಂಟ್ರೋಲ್ ಸೆಂಟರ್‌ಗಳು ಮತ್ತು ಆಂಬುಲೆನ್ಸ್‌ಗಳ ದೈನಂದಿನ ನಿರ್ವಹಣೆಯ ಮೇಲ್ವಿಚಾರಣೆ ಮತ್ತು ಪರಿವೀಕ್ಷಣೆ ಜವಾಬ್ದಾರಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ವಹಿಸಬೇಕು. ಆಂಬುಲೆನ್ಸ್ ಚಾಲಕರು, ಶುಶ್ರೂಷಕ ಸಿಬ್ಬಂದಿಯನ್ನು ಜಿಲ್ಲಾ ಮಟ್ಟದಲ್ಲಿಯೇ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸುವಂತೆ ಎಂದು ಸರ್ಕಾರವು ಆದೇಶದಲ್ಲಿ ತಿಳಿಸಿದೆ. ಆರೋಗ್ಯ ಇಲಾಖೆಯಿಂದಲೇ ನಿರ್ವಹಣೆ ಮಾಡುವುದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸುಮಾರು 250 ಕೋಟಿ ರೂ. ಉಳಿತಾಯವಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.