ಮಧುಗಿರಿ : ಸುಮಾರು 3 ಲಕ್ಷ ಜನಸಂಖ್ಯೆ ಇರುವ ತಾಲೂಕಿನಲ್ಲಿ 108 ಆಂಬುಲೆನ್ಸ್ ಐಸಿಯುನಲ್ಲಿದ್ದು, ಆರೋಗ್ಯ ರಕ್ಷಾ ಕವಚ ಎಂಬ ಹೆಸರಿನಲ್ಲಿ ಜಾರಿಗೊಂಡ ಈ ಯೋಜನೆಗೆ ಮೇಜರ್ ಸರ್ಜರಿ ಬೇಕಿದೆ.
ತುರ್ತು ಸಂದರ್ಭದಲ್ಲಿ 108 ಸೇವೆ ದೊರೆಯದೇ ಜೀವ ಕಳೆದುಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದರೂ, ಆರೋಗ್ಯ ಇಲಾಖೆ ಮಾತ್ರ ಮೌನವಹಿಸಿದೆ. ತಾಲೂಕಿನ ಬಗ್ಗೆ ಇಲಾಖೆಗೆ ಇಷ್ಟೊಂದು ನಿರ್ಲಕ್ಷ್ಯವೇಕೆ ಎಂಬುದು ಮಾತ್ರ ನಿಗೂಢವಾಗಿದೆ. ಮೊದಲಿಂದಲೂ 108 ಆಂಬುಲೆನ್ಸ್ ಸೌಕರ್ಯ ಮರೀಚಿಕೆ ಎನಿಸಿದ್ದು ಅಪಘಾತ, ಹೆರಿಗೆ ಸೇರಿ ತುರ್ತು ಸಂದರ್ಭಗಳಲ್ಲಿ ಆರೋಗ್ಯ ರಕ್ಷಾ ಕವಚದ ಸೇವೆ ದೊರೆಯದೆ ಹಲವು ಬಾರಿ ರೋಗಿಗಳು ಜೀವ ಕಳೆದುಕೊಂಡ ನಿದರ್ಶನಗಳು ನಿರಂತರವಾಗಿ ವರದಿಯಾಗುತ್ತಲೇ ಇದ್ದರೂ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಂತೆ ಕಂಡುಬರುತ್ತಿಲ್ಲ.
5 ಹೋಬಳಿಗಳಿಗೆ ಒಂದೇ ಆಂಬುಲೆನ್ಸ್: ಕಸಬಾ, ಪುರವರ, ಕೊಡಿಗೇನಹಳ್ಳಿ, ಮಿಡಿಗೇಶಿ, ದೊಡ್ಡೇರಿ ಸೇರಿ 5 ಹೋಬಳಿಗಳಲ್ಲಿ ತುರ್ತು ಆರೋಗ್ಯ ಸೇವೆಗೆ ಇರುವುದು ಒಂದೇ ಆಂಬುಲೆನ್ಸ್. ಮಧುಗಿರಿ ಪಟ್ಟಣ ಹಾಗೂ ಐಡಿಹಳ್ಳಿ ಹೋಬಳಿಯಲ್ಲಿ ಮಾತ್ರ 108 ಸೇವೆಯಿದ್ದು, ಅದರಲ್ಲಿ ಒಂದು ವಾಹನ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಪಾವಗಡ ತಾಲೂಕಿನಲ್ಲಿ 5, ಶಿರಾ, ಕೊರಟಗೆರೆ ತಾಲೂಕಿನಲ್ಲಿ ತಲಾ 5 ಆಂಬುಲೆನ್ಸ್‌ಗಳಿವೆ. ಕೊರಟಗೆರೆಯಲ್ಲಿ 2, ಶಿರಾ, ಪಾವಗಡ ತಾಲೂಕಿನಲ್ಲಿ ತಲಾ 3 ಸರ್ಕಾರಿ ಆಂಬುಲೆನ್ಸ್ ವಾಹನಗಳು ತುರ್ತು ಸಂದರ್ಭದಲ್ಲಿ ಕೆಲಸ ನಿರ್ವಹಿಸುತ್ತಿವೆ. ಆದರೆ, ಉಪವಿಭಾಗವಾದ ಮಧುಗಿರಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಾತ್ರ 2 ಆಂಬುಲೆನ್ಸ್ ವಾಹನಗಳು ಕೆಲಸ ನಿರ್ವಹಿಸುತ್ತಿವೆ.
ವೇತನ ಸಮಸ್ಯೆ: ಆಂಬುಲೆನ್ಸ್ ನೌಕರರಿಗೆ ಕನಿಷ್ಠ ವೇತನ ನೀಡಬೇಕು ಎಂದು ಕಾರ್ಮಿಕ ಇಲಾಖೆ ಹೇಳುತ್ತದೆ. ಆದರೆ, ಕಾರ್ಯರೂಪಕ್ಕೆ ಬಂದಿಲ್ಲ. ನೌಕರರು ಏಜೆನ್ಸಿ ಮೂಲಕ ನೇಮಕವಾಗಿರುವುದರಿಂದ ಅವರ ವೇತನವೂ ಕಾಲಕಾಲಕ್ಕೆ ಆಗುತ್ತಿಲ್ಲ. ವೇತನವನ್ನೇ ನಂಬಿಕೊಂಡಿರುವ ಬಹುತೇಕ ನೌಕರರ ಕುಟುಂಬಗಳು ತತ್ತರಿಸಿದ್ದು, ನೌಕರರು ಕೆಲಸದ ಮೇಲೆ ನಿರ್ಲಕ್ಷ್ಯ ವಹಿಸಿ ಸಮಸ್ಯೆಗಳಿಗೆ ಸ್ಪಂದಿಸದಿರಲು ಇದೂ ಪ್ರಮುಖ ಕಾರಣ ಎನ್ನಲಾಗಿದೆ.
ಶೆಡ್ ಸೇರಿದೆ ಆಂಬುಲೆನ್ಸ್ : ಮಧುಗಿರಿ ತಾಲೂಕಿನಲ್ಲಿ ಆಂಬುಲೆನ್ಸ್ ಕೊರತೆ ಮನಗಂಡು ಸುಮಾರು 15 ದಿನಗಳ ಹಿಂದೆ ವಿಧಾನಪರಿಷತ್ ಸದಸ್ಯ ಚಿದಾನಂದ ಎಂ.ಗೌಡ ಮಧುಗಿರಿಯ ಸಾರ್ವಜನಿಕ ಆಸ್ಪತ್ರೆಗೆ ನೂತನ ಆ್ಯಂಬುಲೆನ್ಸ್ ವಾಹನವನ್ನು ಕೊಡುಗೆಯಾಗಿ ನೀಡಿದ್ದಾರೆ. ಆದರೆ, ಈ ವಾಹನ ಸಾರ್ವಜನಿಕರ ಸೇವೆಗೆ ಲಭ್ಯವಾಗಿಲ್ಲ. ವಿಮಾ ಪಾವತಿ ನೆಪವೊಡ್ಡಿ ಈ ವಾಹನವು ಶೆಡ್ ಸೇರಿದೆ.
ಮಧುಗಿರಿ ಸರ್ಕಾರಿ ಆಸ್ಪತ್ರೆಗೆ ಇತ್ತೀಚೆಗೆ ಎಂಎಲ್ಸಿ ಚಿದಾನಂದ ಎಂ.ಗೌಡ ಆಂಬುಲೆನ್ಸ್ ವಾಹನ ಕೊಡುಗೆಯಾಗಿ ನೀಡಿದ್ದು, ಸರ್ಕಾರಿ ವಾಹನಗಳಿಗೆ ಖಾಸಗಿ ಇನ್ಶೂರೆನ್ಸ್ ಮಾಡಿಸುವಂತಿಲ್ಲ. ಕೆಜಿಐಡಿ ಇನ್ಶೂರೆನ್ಸ್ ಮಾಡಿಸಬೇಕಿದ್ದು, ಈಗಾಗಲೇ 26 ಸಾವಿರ ರೂಪಾಯಿ ಖಜಾನೆ ಇಲಾಖೆಗೆ ಪಾವತಿಸಲಾಗಿದ್ದು, ವಿಮಾ ಪಾವತಿ ಹಾಗೂ ವಾಹನ ನೋಂದಣಿ ಮಾಡಿಸಿದ ನಂತರ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ. ಡಾ. ಗಂಗಾಧರ್, ಆಸ್ಪತ್ರೆ ವೈದ್ಯಾಧಿಕಾರಿ ತಾಲೂಕಿನಲ್ಲಿ ಆರೋಗ್ಯ ಆಂಬುಲೆನ್ಸ್ ಸಮಸ್ಯೆ ಇರುವುದು ನಿಜ. ಸಮಸ್ಯೆ ಬಗ್ಗೆ ಜಿಲ್ಲಾ ವೈದ್ಯಾಧಿಕಾರಿಗಳಿಗೆ ಪತ್ರ ಬರೆದು ಗಮನಕ್ಕೆ ತರಲಾಗುವುದು. ನನ್ನ ಮಡದಿ ಹಾಗೂ ಹಸುಗೂಸು ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಸೇವೆ ದೊರೆಯದೆ ಹೆರಿಗೆ ಸಂದರ್ಭದಲ್ಲಿ ಮೃತಪಟ್ಟಿದ್ದು ನಮ್ಮ ಕುಟುಂಬಕ್ಕಾದ ನೋವು ಬೇರೆ ಯಾರಿಗೂ ಆಗದಿರಲಿ. ನಾಗರಾಜು, ಇತ್ತೀಚೆಗೆ ಮೃತಪಟ್ಟ ಕೋಮಲ ಎಂಬುವರ ಪತಿ