ಜಿಲ್ಲೆ

105 ಕೋಟಿ ರೂ. ವೆಚ್ಚದಲ್ಲಿ ಕೆರೆಗಳಿಗೆ ನೀರು

ಚಿತ್ರದುರ್ಗ: ರೈತರ ತೋಟಗಳು ಒಣಗಬಾರದೆಂಬ ಉದ್ದೇಶದಿಂದ ಭದ್ರಾ ಮೇಲ್ದಂಡೆ ಯೋಜನೆಯಡಿ ಕ್ಷೇತ್ರದ ವಿವಿಧ ಕೆರೆಗಳಿಗೆ ನೀರು ಹರಿಸಲು ಮಲ್ಲಸಿಂಗನಹಳ್ಳಿ ಗುಡ್ಡದಲ್ಲಿ 105 ಕೋಟಿ ರೂ. ವೆಚ್ಚದ ಮೂರು ಮೋಟಾರ್‌ಗಳನ್ನು ಕೂರಿಸಲಾಗುತ್ತಿದೆ ಎಂದು ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು.

ಕೆಎಂಇಆರ್‌ಸಿ ಯೋಜನೆಯಡಿ 15.48 ಕೋಟಿ ರೂ. ವೆಚ್ಚದಲ್ಲಿ ತಾಲೂಕಿನ ಹಳೆಹಳ್ಳಿ ಲಂಬಾಣಿಹಟ್ಟಿಯಿಂದ ಗಿಲಕೇನಹಳ್ಳಿ, ಗರಗ, ಮೇಕೆನಹಟ್ಟಿ ಮಾರ್ಗವಾಗಿ ಅಪ್ಪರಸನಹಳ್ಳಿವರೆಗೂ ನಿರ್ಮಿಸಲು ಉದ್ದೇಶಿಸಿರುವ ನೂತನ ಸಿ.ಸಿ.ರಸ್ತೆ ಕಾಮಗಾರಿಗೆ ಮಂಗಳವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಯೋಜನೆಯಡಿ ಟಿ.ಎಮ್ಮಿಗನೂರು, ಶಿವಗಂಗಾ, ತಾಳ್ಯ, ಎಚ್.ಡಿ.ಪುರ, ಕೆರೆಯಾಗಳಹಳ್ಳಿ ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಭರವಸೆ ನೀಡಿದರು.

ಮೂರು ದಶಕಗಳ ಹಿಂದೆ ಮೊದಲ ಬಾರಿ ಭರಮಸಾಗರ ಕ್ಷೇತ್ರದ ಶಾಸಕನಾದ ವೇಳೆ ಸರ್ಕಾರದ ಖಜಾನೆಯಲ್ಲಿ ಹಣವಿರಲಿಲ್ಲ. ಅಂತಹ ಕಷ್ಟದ ಪರಿಸ್ಥಿತಿಯಲ್ಲೂ 5 ವರ್ಷ ಹಗಲಿರುಳು ಶ್ರಮಿಸಿ, 386 ಹಳ್ಳಿಗಳಲ್ಲೂ ರಸ್ತೆಗಳನ್ನು ನಿರ್ಮಿಸಿದ್ದರಿಂದ ಜನ ನನಗೆ ರಸ್ತೆ ರಾಜ ಎಂಬ ಬಿರುದು ನೀಡಿ ಮತ್ತೊಮ್ಮೆ ಶಾಸಕನಾಗಲು ಅವಕಾಶ ಕಲ್ಪಿಸಿದರು ಎಂದು ಸ್ಮರಿಸಿದರು.

ಜನರ ಕಷ್ಟಕ್ಕೆ ಸ್ಪಂದಿಸಿ ಕೆಲಸ ಮಾಡುತ್ತೇನೆ. ಕೊನೆ ಉಸಿರಿರುವವರೆಗೂ ಕ್ಷೇತ್ರ ಹಾಗೂ ಗಿಲಿಕೇನಹಳ್ಳಿ ಜನರನ್ನು ಮಾತ್ರ ಮರೆಯುವುದಿಲ್ಲ ಎಂದರು.

ಹೊಳಲ್ಕೆರೆ ಕ್ಷೇತ್ರಕ್ಕೆ 493 ಹಳ್ಳಿಗಳು ಸೇರಿವೆ. ಚನ್ನಗಿರಿ, ತರಿಕೆರೆ ಗಡಿವರೆಗೂ ವ್ಯಾಪ್ತಿ ಹರಡಿದೆ. ದೇಶಕ್ಕೆ ಸ್ವಾತಂತ್ರೃ ಲಭಿಸಿ 78 ವರ್ಷವಾದರೂ ಅನೇಕ ಹಳ್ಳಿಗಳಿಗೆ ರಸ್ತೆ ಇಲ್ಲವೆಂಬುದನ್ನು ಅರಿತು ತಾಲೂಕಿನಾದ್ಯಂತ ಎಲ್ಲ ಗ್ರಾಮಗಳಲ್ಲೂ ಗುಣಮಟ್ಟದ ರಸ್ತೆ ನಿರ್ಮಿಸಿದ್ದೇನೆ ಎಂದು ಹೇಳಿದರು.

ರಸ್ತೆಗಳು ಅಭಿವೃದ್ಧಿ ಹೊಂದಿದಲ್ಲಿ ದೇಶ ಪ್ರಗತಿಯತ್ತ ಸಾಗುತ್ತಿದೆ ಎಂದರ್ಥ. ಅದಕ್ಕಾಗಿ ಪ್ರಧಾನಿ ನರೇಂದ್ರಮೋದಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ರಸ್ತೆ ನಿರ್ಮಾಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ ಎಂದರು.

ಹಿರಿಯೂರಿನ ವಿ.ವಿ.ಸಾಗರದ ಮಧ್ಯೆ ನೀರಿನಲ್ಲಿ 50ರಿಂದ 60 ಅಡಿ ಆಳದಲ್ಲಿ ಮೋಟಾರ್ ಕೂರಿಸಿ, ಪೈಪ್‌ಲೈನ್, ಫಿಲ್ಟರ್ ಅಳವಡಿಕೆಗೆ 60 ಕೋಟಿ ರೂ., ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸಲಿಕ್ಕಾಗಿ ಪೈಪ್‌ಲೈನ್ ಅಳವಡಿಸಲು 367 ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಇನ್ನೂ ಮೂರ‌್ನಾಲ್ಕು ತಿಂಗಳಲ್ಲಿ ಕಾರ್ಯಗತವಾಗಲಿದೆ ಎಂದು ಆಶ್ವಾಸನೆ ನೀಡಿದರು.

ಗ್ರಾಪಂ ಅಧ್ಯಕ್ಷೆ ವಾಣಿ ಗಿರೀಶ್, ಉಪಾಧ್ಯಕ್ಷೆ ವಿಶಾಲಮ್ಮ, ಗಂಗಾಧರಾಚಾರಿ, ಸದಸ್ಯರಾದ ರಾಮಪ್ಪ, ಹನುಮಂತಪ್ಪ, ಈಶ್ವರಪ್ಪ, ಗೋವಿಂದಪ್ಪ, ರಂಗಸ್ವಾಮಿ, ರಾಜಪ್ಪ, ಶಿವಣ್ಣ, ರಂಗಪ್ಪ, ಕೃಷ್ಣಮೂರ್ತಿ, ರಾಜಪ್ಪ, ಪ್ರಶಾಂತ್, ಬಿಇಒ ಶ್ರೀನಿವಾಸ್, ಗುತ್ತಿಗೆದಾರ ಜೈರಾಮ್, ಗ್ರಾಮಸ್ಥರಿದ್ದರು.