ಕೊಕಟನೂರ: ಅಥಣಿ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ 13.35 ಕೋಟಿ ರೂ. ವೆಚ್ಚದಲ್ಲಿ 105 ನೂತನ ಶಾಲಾ ಕೊಠಡಿಗಳ ನಿರ್ಮಾಣಕ್ಕೆ ಮಂಜೂರಾತಿ ದೊರೆತಿದ್ದು, ಶಿಕ್ಷಣ ಸುಧಾರಣೆಗೆ ಹಾಗೂ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದು ಶಾಸಕ ಮಹೇಶ ಕುಮಠಳ್ಳಿ ಹೇಳಿದರು.
ಅಥಣಿ ತಾಲೂಕಿನ ದರೂರ, ಅವರಖೋಡ, ಹುಲಗಬಾಳ, ತೀರ್ಥ, ಸಪ್ತಸಾಗರ, ಶೇಗುಣಸಿ ಹಾಗೂ ದಬಧಬಹಟ್ಟಿ ಗ್ರಾಮಗಳಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ನಬಾರ್ಡ್ ಯೋಜನೆಯಡಿ ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ, ದರೂರ ಗ್ರಾಮದಲ್ಲಿ ಮಂಗಳವಾರ ಅವರು ಮಾತನಾಡಿದರು. ಜಿರೋ ಪಾಯಿಂಟ್‌ದಿಂದ ಹಿಪ್ಪರಗಿ ಅಣೆಕಟ್ಟೆಯವರೆಗಿನ 5 ಕಿ.ಮೀ. ರಸ್ತೆ ಹಾಗೂ ಹಿಪ್ಪರಗಿ ಅಣೆಕಟ್ಟೆಯ ಸುಧಾರಣೆಗೆ 10 ಕೋಟಿ ರೂ. ಮಂಜೂರಾತಿ ದೊರಕಿದ್ದು, ಶೀಘ್ರದಲ್ಲಿಯೇ ಕೆಲಸ ಪ್ರಾರಂಭಿಸಲಾಗುವುದು, ಪ್ರವಾಹದಿಂದ ತಾಲೂಕಿನ ಪಶ್ಚಿಮ ಹಾಗೂ ದಕ್ಷಿಣ ಭಾಗದ 32ಕ್ಕೂ ಹೆಚ್ಚು ಗ್ರಾಮಗಳಲ್ಲಿ ರಸ್ತೆಗಳು ಹದಗೆಟ್ಟಿವೆ.
ಹಂತ ಹಂತವಾಗಿ ರಸ್ತೆ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗುವುದು ಎಂದರು. ಶಿಕ್ಷಣ, ರಸ್ತೆ, ಆರೋಗ್ಯಕ್ಕೆ ಹೆಚ್ಚಿನ ಮಹತ್ವ ನೀಡುವ ಯೋಜನೆಗಳನ್ನು ಮುಖ್ಯಮಂತ್ರಿಯವರು ರೂಪಿಸಿದ್ದಾರೆ ಎಂದರು. ಅಮೂಲ ನಾಯಿಕ, ನಿಂಗಪ್ಪ ನಂದೇಶ್ವರ, ಅಣ್ಣಾಸಾಬ ನಾಯಿಕ, ಸುರೇಶ ಮಾಯಣ್ಣವರ, ಕುಮಾರ ವೀರಗೌಡ, ದಶರಥ ಅಂಬಿ, ಅಣ್ಣಪ್ಪ ದೂಲಕೇಡ, ಸಂಜುಗೌಡ ಪಾಟೀಲ, ಸಂಜು ಹಾದಿಮನಿ, ಮುರಗೆಪ್ಪ ಶಿವನೂರ, ಗೋಪಾಲ ಮಂಗಸೂಳಿ, ಸಂಗಮೇಶ ಇಂಗಳಿ, ಲೋಕೋಪಯೋಗಿ ಇಲಾಖೆಯ ಎಇಇ ಜಯಾನಂದ ಹಿರೇಮಠ, ಅಭಿಯಂತ ಎ.ಜಿ. ಮುಲ್ಲಾ, ಜಿ.ಎಂ ಗುಳಪ್ಪನವರ, ನಾಗರಾಜ ಕಾಂಬಳೆ ಇದ್ದರು.