ವಿಜಯವಾಣಿ ಸುದ್ದಿಜಾಲ ಧಾರವಾಡ
ನಗರದ ಗಾಂಧಿಚೌಕ್ ಹಾಗೂ ಹೆಬ್ಬಳ್ಳಿ ಅಗಸಿ ರಸ್ತೆಯಲ್ಲಿ ಅನಧಿಕೃತವಾಗಿ ಮಾರಾಟ ಮಾಡಲಾಗುತ್ತಿದ್ದ 105 ಪ್ಲಾಸ್ಟರ್ ಆಫ್ ಪ್ಯಾರಿಸ್ (ಪಿಒಪಿ) ಗಣೇಶ ಮೂರ್ಥಿಗಳನ್ನು ಹು-ಧಾ ಮಹಾನಗರ ಪಾಲಿಕೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಪರಿಸರಕ್ಕೆ ಹಾನಿ ಉಂಟು ಮಾಡುವ ಕಾರಣಕ್ಕೆ ಪಿಒಪಿ ಗಣಪತಿ ಮೂರ್ತಿಗಳ ಮಾರಾಟ, ಸಾಗಾಟ, ಬಳಕೆ ನಿಷೇಧಿಸಲಾಗಿದೆ. ಈ ವಿಷಯವಾಗಿ ಜಿಲ್ಲಾಡಳಿತ ರೂಪಿಸಿರುವ ಕಾರ್ಯಪಡೆ ನಿರಂತರ ತಪಾಸಣೆ ನಡೆಸುತ್ತಿದೆ. ಈ ಸಂಬಂಧ ಗಾಂಧಿ ಚೌಕ್ ಮತ್ತು ಹೆಬ್ಬಳ್ಳಿ ಅಗಸಿ ಬಳಿ ತಪಾಸಣೆ ನಡೆಸಿದಾಗ ಲಕ್ಷ್ಮಣರಾವ್ ಮೋರೆ ಎಂಬುವವರು ಮಾರುತ್ತಿದ್ದ ಮೂರ್ತಿಗಳನ್ನು ಜಪ್ತಿ ಮಾಡಿದ್ದಾರೆ.
ಮಣ್ಣಿನ ಗಣಪತಿ ಎಂದು ಮಾರಾಟ ಮಾಡುತ್ತಿದ್ದರು. ಅವುಗಳನ್ನು ಪರಿಶೀಲಿಸಿದಾಗ ಮಣ್ಣಿನ ವಿಗ್ರಹಗಳಂತೆ ಕಂಡರೂ ಪಿಒಪಿ ಮಿಶ್ರಣ ಎಂಬ ಸಂಶಯದಿಂದ ಮಾದರಿ ಸಂಗ್ರಹಿಸಲಾಗಿತ್ತು. ಗಣಪತಿ ವಿಗ್ರಹಗಳು ಪಿಒಪಿ ವಿಗ್ರಹಗಳು ಎಂಬುದು ವರದಿಯಿಂದ ಖಚಿತಪಟ್ಟ ಬಳಿಕ 105 ವಿಗ್ರಹಗಳನ್ನು ಪಡಿಸಿಕೊಂಡಿದ್ದಾರೆ.
ಕಾರ್ಯಾಚರಣೆಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಅಧಿಕಾರಿ ಜಗದೀಶ ಐ. ಎಚ್., ವಲಯ ಕಚೇರಿ 2ರ ಸಹಾಯಕ ಆಯುಕ್ತ ಮಹೇಶ ಹಾಲಗಿ, ಪರಿಸರ ಅಭಿಯಂತರ ಅವಿನಾಶ, ಹಿರಿಯ ಆರೋಗ್ಯ ನಿರೀಕ್ಷಕರಾದ ಪ್ರತಿಮಾ, ಶಾಂತಗೌಡ ಬಿರಾದರ್, ಎಎಸ್ಐ ಎಸ್.ಬಿ.ಹಳ್ಳಿ, ಎಚ್.ಎಫ್.ನದಾಫ್, ಇತರರು ಇದ್ದರು.