ರೋಣ: ಪ್ರಾಣ ಬೇಕಿದ್ದರೆ ಕೊಡುತ್ತೇವೆ. ಆದರೆ, ಯಾವುದೇ ಕಾರಣಕ್ಕೂ ಹೊಸಳ್ಳಿ ಗ್ರಾಮ ಪಂಚಾಯಿತಿ ಕಚೇರಿಯನ್ನು ಬೇರೆ ಗ್ರಾಮಕ್ಕೆ ಬಿಟ್ಟು ಕೊಡುವುದಿಲ್ಲ ಎಂದು ಹೊಸಳ್ಳಿ ಗ್ರಾಮಸ್ಥರು ಒಕ್ಕೊರಲಿನಿಂದ ತಮ್ಮ ನಿಲುವು ಸ್ಪಷ್ಟಪಡಿಸಿದರು.
ಹೊಸಳ್ಳಿ ಗ್ರಾಪಂ ಕಚೇರಿ ಸ್ಥಳಾಂತರ ವಿಚಾರವಾಗಿ ಹೊಸಳ್ಳಿ ಮತ್ತು ಕಳಕಾಪೂರ ಗ್ರಾಪಂ ಸದಸ್ಯರು ಹಾಗೂ ಗ್ರಾಮದ ಮುಖಂಡರಿಗಾಗಿ ಶನಿವಾರ ತಹಸೀಲ್ದಾರ್ ಜೆ.ಬಿ. ಜಕ್ಕನಗೌಡ್ರ ಅವರು ಏರ್ಪಡಿಸಿದ್ದ ಸಭೆಯಲ್ಲಿ ಗ್ರಾಮಸ್ಥರು ತಮ್ಮ ನಿರ್ಧಾರ ತಿಳಿಸಿದರು.
2015ರಲ್ಲಿ ನಿಡಗುಂದಿ ಗ್ರಾಪಂನಿಂದ ಬೇರ್ಪಟ್ಟು ಹೊಸಳ್ಳಿ, ಕಳಕಾಪೂರ, ಜಿಗಳೂರ ಒಳಗೊಂಡು ನೂತನವಾಗಿ ಹೊಸಳ್ಳಿ ಗ್ರಾಪಂ ನಿರ್ವಣವಾಗಿತ್ತು. ಇದನ್ನು ವಿರೋಧಿಸಿ 2015,
2020ರ ಗ್ರಾಪಂ ಚುನಾವಣೆ ಬಹಿಷ್ಕರಿಸಿ ಹೋರಾಟ ಮಾಡುತ್ತ ಬಂದಿದ್ದ ಜಿಗಳೂರ ಗ್ರಾಮಸ್ಥರು ಜನವರಿ 6 ರಂದು ನೂರಕ್ಕೂ ಹೆಚ್ಚು ಎತ್ತು, ಚಕ್ಕಡಿಗಳ ಬೃಹತ್ ಪ್ರತಿಭಟನೆಯೊಂದಿಗೆ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ತಾಪಂ ಇಒ ಸಂತೋಷ ಪಾಟೀಲ, ಪ್ರತಿಭಟನಾನಿರತರ ಮನವೊಲಿಸಿ 10 ದಿನಗಳ ಕಾಲಾವಕಾಶ ನೀಡಿ, ನಾನು ಹೊಸಳ್ಳಿ ಹಾಗೂ ಕಳಕಾಪೂರ ಗ್ರಾಮಸ್ಥರ ಮನವೊಲಿಸಿ ಸೂಕ್ತ ನಿರ್ಣಯ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದರು. ಆ ನಿಟ್ಟಿನಲ್ಲಿ ಶನಿವಾರ ತಹಸೀಲ್ದಾರ್ ಕಚೇರಿಯಲ್ಲಿ ಹೊಸಳ್ಳಿ ಹಾಗೂ ಕಳಕಾಪೂರ ಗ್ರಾಮಸ್ಥರ ಸಭೆ ನಡೆಸಿದರು.
ಸಭೆಯಲ್ಲಿ ಒಗ್ಗಟ್ಟು ಪ್ರದರ್ಶಿಸಿದ ಕಳಕಾಪೂರ ಗ್ರಾಮಸ್ಥರು, ಈ ಮೊದಲಿನಂತೆ ಹೊಸಳ್ಳಿ ಗ್ರಾಮದಲ್ಲಿಯೇ ಗ್ರಾಪಂ ಕಚೇರಿ ಇರಲಿ, ಒಂದು ವೇಳೆ ಜಿಗಳೂರ ಗ್ರಾಮಕ್ಕೆ ನೀಡಿದರೆ, ನಮಗೂ ಗ್ರಾಪಂ ಕಚೇರಿ ಬೇಕು ಎಂದು ಆಗ್ರಹಿಸಿದರು.
ಗ್ರಾಪಂ ಸದಸ್ಯರಾದ ಕಳಕಪ್ಪ ರಾಜೂರ, ನೀಲಮ್ಮ ಹಿರೇಮಠ, ಯಮನೂರಪ್ಪ ಹರ್ಲಾಪೂರ, ಬಸವರಡ್ಡಿ ರಡ್ಡೇರ, ಬಸಪ್ಪ ಮಾರನಬಸರಿ, ಬಸಮ್ಮ ಸ್ಥಾವರಮಠ, ಶಾರದಾ ಅಂಗಡಿ, ಲಲಿತಾ ಕುರಿ, ಮುಖಂಡರಾದ ಕೆ.ಡಿ. ಪಾಟೀಲ,. ವಿ.ಬಿ. ಸಾಲಿ, ಬಿ.ಎ ಪಟ್ಟಣಶೆಟ್ಟಿ, ಅಮರೇಶ ಹದ್ಲಿ, ಬಸವಂತಪ್ಪ ಮಾರನಬಸರಿ, ಶರಣಪ್ಪ ಕಂಬಳಿ, ಪರಸಪ್ಪ ಮಾದರ, ಮಲ್ಲು ಮಾದರ, ಇತರರಿದ್ದರು.
ಸ್ಥಳಾಂತರ ಅಸಾಧ್ಯ
ಹೊಸಳ್ಳಿ ಗ್ರಾಮದ ಮುಖಂಡರಾದ ಎ.ಕೆ. ಮುಧೋಳ, ಆರ್.ಕೆ. ಪಿಂಜಾರ, ಪ್ರಕಾಶ ಹೊಸಳ್ಳಿ ಮಾತನಾಡಿ, ‘ಕಾನೂನು ರೀತಿಯಲ್ಲಿ ಗ್ರಾಪಂ ಕೇಂದ್ರ ಸ್ಥಾನದಲ್ಲಿ ಗ್ರಾಪಂ ಕಚೇರಿ ಇರಬೇಕು. ಅದನ್ನು ಬದಲಾಯಿಸುವುದು ಅಸಾಧ್ಯದ ಮಾತು. ಯಾವುದೇ ಕಾರಣಕ್ಕೂ ನಾವು ಅದನ್ನು ಒಪ್ಪುವುದಿಲ್ಲ. ಜಿಗಳೂರ ಗ್ರಾಮಸ್ಥರು, ಇನ್ನು ಹತ್ತು ಗ್ರಾಪಂ ಚುನಾವಣೆಗಳನ್ನು ಬಹಿಷ್ಕರಿಸಲಿ. ಅದು ಅವರ ವಿವೇಚನೆಗೆ ಬಿಟ್ಟ ವಿಚಾರ. ಈ ಬಗ್ಗೆ ನಮ್ಮ ಗ್ರಾಮದವರಾರು ತಲೆ ಕೆಡಿಸಿಕೊಳ್ಳುವುದಿಲ್ಲ. ಇನ್ನು 6 ತಿಂಗಳಲ್ಲಿ ಜಿಗಳೂರ ಗ್ರಾಪಂ ಚುನಾವಣೆ ಘೊಷಣೆಯಾಗುತ್ತದೆ. ಅದಕ್ಕೆ ಜಿಗಳೂರ ಗ್ರಾಮಸ್ಥರು ಒಪ್ಪಿ ಚುನಾವಣೆಗೆ ಸ್ಪರ್ಧಿಸಿದರೆ ಒಳಿತು. ಇಲ್ಲದಿದ್ದರೆ, ನಮ್ಮ ಗ್ರಾಮಸ್ಥರು ಜಿಗಳೂರ ಗ್ರಾಮದ ಪರವಾಗಿ ಚುನಾವಣೆಗೆ ಸ್ಪರ್ಧಿಸುತ್ತೇವೆ’ ಎಂದು ತಿಳಿಸಿದರು.
EndFragment