ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಕುಟುಂಬದಂತಿರುವ ಸಹಕಾರ ಸಂಘದಲ್ಲಿ ಸದಸ್ಯರೇ ಆಧಾರಸ್ಥಂಭಗಳು ಎಂದು ಟೌನ್ ಕೋ ಆಪರೇಟೀವ್ ಸೊಸೈಟಿ ಪ್ರಭಾರ ಅಧ್ಯಕ್ಷ ಎನ್.ಚನ್ನಬಸವರಾಜು ಅಭಿಪ್ರಾಯಪಟ್ಟರು.
ನಗರದ ಶ್ರೀ ಜಯದೇವ ವೀರಶೈವ ಭವನದಲ್ಲಿ ಆಯೋಜಿಸಿದ್ದ ಸಂಘದ 102ನೇ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಮತ್ತು ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ತಾಲೂಕಿನಲ್ಲಿ ಶತಮಾನ ತುಂಬಿರುವ ಏಕೈಕ ಸಹಾಕಾರ ಸಂಘವಾಗಿದ್ದು, ನೂರಾರು ಸಮಾಜಮುಖಿ ಕಾರ್ಯಕ್ರಮ ರೂಪಿಸಿದೆ. ಸಂಘದಲ್ಲಿ ಆರಂಭಿಸಿರುವ ಇ-ಸ್ಟ್ಯಾಂಪ್ ಸೌಲಭ್ಯದಿಂದ ಹೆಚ್ಚು ಪ್ರಯೋಜನವಾಗಿದೆ ಎಂದರು.
ಸಂಘದ ಹಿರಿಯ ಸಹಕಾರಿಗಳ ಸಹಕಾರದಿಂದ ವರ್ಷದಿಂದ ವರ್ಷಕ್ಕೆ ಸಂಘ ಬೆಳೆಯುತ್ತಿದೆ. ಸದಸ್ಯರು ಸಂಘದೊಂದಿಗೆ ನಿರಂತರ ಸಂಪರ್ಕವಿರಿಸಿಕೊಂಡು ಸೂಕ್ತ ಸಲಹೆ ಸೂಚನೆ ಕೊಡಬೇಕು. ನ್ಯೂನತೆ ಸರಿಪಡಿಸುವ ಕೆಲಸ ಮಾಡಬೇಕು ಎಂದರು.
ಎಸ್ಸೆಸ್ಸೆಲ್ಸಿ, ಪಿಯುಸಿ, ಪದವಿ ಇಂಜಿನಿಯರಿಂಗ್, ವೈಧ್ಯಕೀಯ ಶಿಕ್ಷಣದಲ್ಲಿ ಉತ್ತಮ ಫಲಿತಾಂಶ ಪಡೆದು ಸಾಧನೆ ಮಾಡಿರುವ ಸಂಘದ ಸದಸ್ಯರ ಪ್ರತಿಭಾವಂತ ಮಕ್ಕಳನ್ನು ಗೌರವಿಸಲಾಯಿತು.
ಸಂಘದ ನಿರ್ದೇಶಕರಾದ ಎನ್.ಕೃಷ್ಣಪ್ಪ, ಎನ್.ಪಿ.ರಘುನಾಥ್, ಎಚ್.ಜಿ.ರಾಜು, ಎನ್.ಜಿ.ಜಗದೀಶ್, ಬಿ.ಆರ್.ನಾರಾಯಣಗುಪ್ತ, ಎಸ್.ಎನ್.ಕಾರ್ತಿಕ್, ಸಿ.ಕೇಶವಮೂರ್ತಿ, ಎಂ.ಎಸ್.ಗೋಪಾಲ್, ಎನ್.ವಿ.ಭಾಗ್ಯಜ್ಯೋತಿ, ಕೆ.ಒ.ಮಹೇಶ್, ಎನ್.ಜಿ.ನಾಗರಾಜು, ಮಾಜಿ ಅಧ್ಯಕ್ಷ ಜಯದೇವಯ್ಯ, ಕಾರ್ಯದರ್ಶಿ ಎಂ.ಎಸ್.ಕವಿತಾ, ಸಿಬ್ಬಂದಿ ಲೋಕೇಶ್, ಕೆ.ಸಿ.ಗಂಗಾಧರ್, ಬಿ.ಪ್ರಿಯಾಂಕಾ, ಎಂ.ಟಿ.ಅರಣ್‌ಕುಮಾರ್,ಮುಖಂಡ ಎನ್.ಗಂಗರಾಜು, ನರಸೇಗೌಡ ಮತ್ತಿತರರು ಉಪಸ್ಥಿತರಿದ್ದರು.