ಜಿಲ್ಲೆ

10:10 ತಿಂಗಳ ಅಧಿಕಾರ ಹಂಚಿಕೆಗೆ ಬದ್ಧ ಎಂದ ಪ್ರೀತಂ ಗೌಡ

ಹಾಸನ: ರಾಷ್ಟ್ರಮಟ್ಟದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು ಅದರಂತೆ ಮೈತ್ರಿ ಧರ್ಮ ಪಾಲನೆಗೆ ನಾವೆಲ್ಲರೂ ಬದ್ಧರಾಗಿದ್ದು ಹಾಸನ ನಗರಸಭಾ ಚುನಾವಣೆಯಲ್ಲಿ 10:10 ತಿಂಗಳು ಅಧಿಕಾರ ಹಂಚಿಕೆಗೆ ನಮ್ಮ ಸಹಮತವಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ ಗೌಡ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ರಾಷ್ಟ್ರ ಮತ್ತು ರಾಜ್ಯಮಟ್ಟದಲ್ಲಿ ಮೈತ್ರಿ ಮಾಡಿಕೊಂಡು ಹೊಂದಾಣಿಕೆಯಿಂದ ಎರಡು ಪಕ್ಷಗಳು ನಡೆದುಕೊಂಡು ಹೋಗುತ್ತಿವೆ. ಅದರಂತೆ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಚುನಾವಣೆ ಸಂದರ್ಭದಲ್ಲಿ ಕೂಡ ರಾಜ್ಯದ ಎಲ್ಲಾ ಕಡೆಯೂ ಕಾಂಗ್ರೆಸ್‌ಅನ್ನು ಅಧಿಕಾರದಿಂದ ಹೊರಗಿಟ್ಟು ಎರಡು ಪಕ್ಷಗಳು ಹೊಂದಾಣಿಕೆಯಿಂದ ಅಧಿಕಾರ ನಡೆಸಲು ತೀರ್ಮಾನಿಸಿದೆ ಎಂದು ತಿಳಿಸಿದರು.
ಈಗಾಗಲೇ ಹಾಸನದಲ್ಲಿ ಜಿಲ್ಲಾಧ್ಯಕ್ಷರ ನೇತೃತ್ವದಲ್ಲಿ ಸಭೆ ನಡೆಸಿ ರಾಜ್ಯಮಟ್ಟದಿಂದ ಉಸ್ತುವಾರಿಗಳು ಆಗಮಿಸಿ, ಪಕ್ಷದ ಮುಖಂಡರು ಮತ್ತು ಸದಸ್ಯರ ಅಭಿಪ್ರಾಯವನ್ನು ಸಂಗ್ರಹಿಸಿದ್ದಾರೆ. ಅದರಂತೆ 10:10 ತಿಂಗಳ ಅನುಪಾತದಲ್ಲಿ ಅಧಿಕಾರ ಹಂಚಿಕೆ ಮಾಡಿಕೊಳ್ಳುವ ಬಗ್ಗೆ ತೀರ್ಮಾನಿಸಿದ್ದು, ಅದನ್ನು ಜೆಡಿಎಸ್ ಪಕ್ಷದ ವರಿಷ್ಠರ ಗಮನಕ್ಕೂ ತರಲಾಗಿದೆ. ಆದರೆ ಯಾರು ಮೊದಲು ಅಧಿಕಾರಕ್ಕೆ ಬರುವುದು ಎಂಬುದರ ಬಗ್ಗೆ ತೀರ್ಮಾನವಾಗಬೇಕಾಗಿದೆ ಎಂದರು.
ಹಾಸನ ನಗರಸಭೆಯಲ್ಲಿ ಎರಡು ಪಕ್ಷಗಳು ಸ್ವತಂತ್ರವಾಗಿದ್ದು ಎರಡು ಪಕ್ಷದವರು ಒಗ್ಗಟ್ಟಿನಿಂದ ಅಧಿಕಾರ ಹಿಡಿಯುವುದು ಸ್ಪಷ್ಟವಾಗಿದೆ. ಅದರಂತೆ ನಮಗೆ ಮೊದಲು ಅವಕಾಶ ನೀಡುವಂತೆ ಕೇಳಿಕೊಂಡಿದ್ದೇವೆ. ಅದೇ ರೀತಿ ಅರಕಲಗೂಡಿನಲ್ಲಿ ನಮಗೆ ಅವಕಾಶವಿರುವುದರಿಂದ ಅವರ ಸಹಕಾರ ಕೇಳಿದ್ದೇವೆ. ಆಲೂರು ಮತ್ತು ಸಕಲೇಶಪುರ ಹಾಗೂ ಅರಸೀಕೆರೆಯಲ್ಲಿ ಹೊಂದಾಣಿಕೆಯಿಂದ ಅವರಿಗೆ ಸಹಕಾರ ನೀಡುವ ಬಗ್ಗೆಯೂ ಚರ್ಚೆ ನಡೆಸಲಾಗಿದೆ ಎಂದು ತಿಳಿಸಿದರು.
ಕಳೆದ ವಿಧಾನ ಪರಿಷತ್ ಚುನಾವಣೆ ಸಂದರ್ಭದಲ್ಲಿ ನಾವೆಲ್ಲರೂ ಮೈತ್ರಿ ಧರ್ಮ ಪಾಲನೆ ಮಾಡಿದ್ದರಿಂದ ಕಾರ್ಯಕರ್ತರು ಮತ್ತು ಮುಖಂಡರು ಒಗ್ಗಟ್ಟಿನಿಂದ ಜೆಡಿಎಸ್ ಪಕ್ಷದ ಅಭ್ಯರ್ಥಿ ವಿವೇಕಾನಂದ ಅವರನ್ನು ಗೆಲ್ಲಿಸಿದ್ದೇವೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಕಾರ್ಯಕರ್ತರ ಚುನಾವಣೆ. ಪ್ರೀತಂ ಗೌಡ ಒಬ್ಬ ಸಾಮಾನ್ಯ ಕಾರ್ಯಕರ್ತನಾಗಿ ಜಿಲ್ಲಾಧ್ಯಕ್ಷರು ಮತ್ತು ಪಕ್ಷದ ವರಿಷ್ಠರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೆ ಅದಕ್ಕೆ ನಾವು ಬದ್ಧರಾಗಿರುತ್ತೇವೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಅಮಿತ್ ಶೆಟ್ಟಿ, ಮೋಹನ್ ಕುಮಾರ್, ವೇಣು ಕುಮಾರ್, ಮಂಜು ಹಾಜರಿದ್ದರು.

ಸ್ಥಳೀಯ ಶಾಸಕರು ವಿಫಲ
ಲೋಕಸಭಾ ಚುನಾವಣೆಯಲ್ಲಿ ಹಾಸನದಲ್ಲಿ ಕಡಿಮೆ ಮತ ಬರಲು ಸ್ಥಳೀಯ ಶಾಸಕರು, ಸಾಂದರ್ಭಿಕ ಮತಗಳನ್ನು ಹಿಡಿದುಕೊಳ್ಳುವಲ್ಲಿ ವಿಫಲರಾಗಿದ್ದು ಹಿನ್ನಡೆಗೆ ಕಾರಣವಾಗಿದೆ ಎಂದು ಪರೋಕ್ಷವಾಗಿ ಶಾಸಕ ಎಚ್.ಪಿ. ಸ್ವರೂಪ್ ಅವರಿಗೆ ಟಾಂಗ್ ನೀಡಿದರು.
ಚುನಾವಣೆ ಸಂದರ್ಭದಲ್ಲಿ ಸಾಂದರ್ಭಿಕ ಮತಗಳಿಂದ ಶಾಸಕರಾಗುವುದಲ್ಲ. ಕಟ್ಟಡಕ್ಕೆ ಫೌಂಡೇಷನ್ ಹಾಕಿ ನಂತರ ಕಟ್ಟಡ ಕಟ್ಟಬೇಕು. ಆಗ ಗಟ್ಟಿಯಾಗುತ್ತದೆ. ನೇರವಾಗಿ ಕಟ್ಟಡ ಕಟ್ಟಲು ಹೋದರೆ ಈ ರೀತಿ ಆಗುತ್ತದೆ. ಶ್ರಮಪಟ್ಟು ವೋಟುಗಳನ್ನು ಗಟ್ಟಿಗೊಳಿಸಿಕೊಳ್ಳಬೇಕು. ಕೇವಲ ಸಾಂದರ್ಭಿಕ ಮತಗಳಿಂದ ಚುನಾವಣೆ ಮಾಡಲು ಆಗುವುದಿಲ್ಲ. ನರೇಂದ್ರ ಮೋದಿ ಅವರನ್ನು ಪ್ರಧಾನಿ ಮಾಡುವ ಉದ್ದೇಶದಿಂದ ಹಾಸನದಲ್ಲಿ ಹೆಚ್ಚು ಮತ ಹಾಕಿದ್ದಾರೆ. ಆದರೆ ಶಾಸಕರು ತಮ್ಮ ಮತವನ್ನು ಹಿಡಿದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ದೂರಿದರು.

ಬಿಜೆಪಿ ಸದಸ್ಯರಿಗೆ ಭಯವಿಲ್ಲ
ಹಾಸನ ನಗರಸಭೆಯಲ್ಲಿ ಗೆದ್ದಿರುವಂತಹ ಬಿಜೆಪಿಯ ಸದಸ್ಯರು ತತ್ವ ಸಿದ್ಧಾಂತಗಳಿಗೆ ಬದ್ಧರಾಗಿದ್ದಾರೆ. ಪಕ್ಷದ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ಪಕ್ಷ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಅದಕ್ಕೆ ಎಲ್ಲರೂ ಕೂಡ ಬದ್ಧರಾಗಿರುತ್ತಾರೆ.ಆ ಹಿನ್ನೆಲೆಯಲ್ಲಿ ನಮ್ಮ ಯಾವ ಸದಸ್ಯರು ಕೂಡ ಪ್ರವಾಸ ಹೋಗಿಲ್ಲ ಮತ್ತು ಅವರಿಗೆ ಯಾವುದೇ ರೀತಿ ಭಯವಿಲ್ಲ ಎಂದು ಹೇಳಿದರು.

ಪ್ರಜಾಪ್ರಭುತ್ವದಲ್ಲಿ ರಾಜ್ಯಪಾಲರಿಗೆ ಅಧಿಕಾರವಿದೆ
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಪ್ರತಿಭಟನೆ ಮಾಡುವ ಹಕ್ಕಿದೆ. ಅದಕ್ಕಾಗಿ ಕಾಂಗ್ರೆಸ್‌ವರು ಕೂಡ ಪ್ರತಿಭಟನೆ ಮಾಡಿದ್ದಾರೆ. ಅದೇ ರೀತಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜ್ಯಪಾಲರಿಗೆ ಅಧಿಕಾರವಿದ್ದು ಅದನ್ನು ಚಲಾಯಿಸಿದ್ದಾರೆ. ಇದರಲ್ಲಿ ಯಾವುದೇ ರೀತಿ ಯಾರ ಹಸ್ತಕ್ಷೇಪ ಇಲ್ಲ ಎಂದು ಪ್ರೀತಂ ಗೌಡರು ಸ್ಪಷ್ಟಪಡಿಸಿದರು.