ಜಿಲ್ಲೆ

101 ಮನೆಗಳಿಗೆ ಹಾನಿ, 77 ಹೆಕ್ಟೇರ್ ಬೆಳೆ ನಾಶ

ಎನ್.ವೆಂಕಟೇಶ್

ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಮಾಹಿತಿ | ಗೌರಿಬಿದನೂರು ತಾಲೂಕಿನಲ್ಲಿ ಪರಿಶೀಲನೆ

 ಗೌರಿಬಿದನೂರು : ವಾರದಿಂದ ಸುರಿಯುತ್ತಿರುವ ಮಳೆಯಿಂದ ಜಿಲ್ಲೆಯಲ್ಲಿ ಇದುವರೆಗೆ 101 ಮನೆಗಳಿಗೆ ಹಾನಿಯಾಗಿದ್ದರೆ, 77 ಹೆಕ್ಟೇರ್‌ನಷ್ಟು ಬೆಳೆ ನಾಶವಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.

ತಾಲೂಕಿನಲ್ಲಿ ಮಳೆ ಹಾನಿಗೊಳಗಾದ ಕಾದಲವೇಣಿ ಗ್ರಾಮಕ್ಕೆ ಶುಕ್ರವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಭಾಗಶಃ ಹಾನಿಗೊಳಗಾದ ಮನೆಗಳಿಗೆ 60 ಸಾವಿರ ರೂ. ಹಾಗೂ ಪೂರ್ಣ ಹಾನಿಗೊಳಗಾದ ಮನೆಗಳಿಗೆ 1.20 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ. ಸಂತ್ರಸ್ತರು ಆತಂಕ ಪಡಬೇಕಾದ ಅಗತ್ಯವಿಲ್ಲ. ಸ್ಥಳೀಯ ಅಧಿಕಾರಿಗಳು ಸಲ್ಲಿಸುವ ವರದಿ ಆಧಾರದ ಮೇಲೆ ಶೀಘ್ರ ಪರಿಹಾರ ವಿತರಣೆಯಾಗಲಿದೆ ಎಂದರು. ಇದೇ ಸಂದರ್ಭದಲ್ಲಿ ಗ್ರಾಮದ ವಯೋವೃದ್ಧರ ಆರೋಗ್ಯ ಮತ್ತು ಯೋಗಕ್ಷೇಮ ವಿಚಾರಣೆ ಮಾಡಿದರು. ಗುಂಡಾಪುರ ಗ್ರಾಮದ ರಾಷ್ಟ್ರೀಯ ಹೆದ್ದಾರಿ ಬಳಿ ಮುಸುಕಿನ ಜೋಳದ ಬೆಳೆಯನ್ನು ಒಕ್ಕಣೆ ಮಾಡುತ್ತಿರುವ ರೈತರನ್ನು ಭೇಟಿ ಮಾಡಿ ಇಳುವರಿ ಬಗ್ಗೆ ಮಾಹಿತಿ ಪಡೆದುಕೊಂಡರು. ಬಳಿಕ ನಗರದ ಕಿಂಡಿ ಅಣೆಕಟ್ಟು ಬಳಿ ಹರಿಯುತ್ತಿರುವ ಉತ್ತರ ಪಿನಾಕಿನಿ ನದಿಯನ್ನು ವೀಕ್ಷಣೆ ಮಾಡಿದರು.

ನಾಡಕಚೇರಿಗೆ ಭೇಟಿ

ನಾಡಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ, 2 ದಿನಗಳ ಹಿಂದಷ್ಟೇ ಇಲ್ಲಿಗೆ ಕಚೇರಿ ಸ್ಥಳಾಂತರಿಸಲಾಗಿದೆ. ಆದಾಗ್ಯೂ ಜನರಿಗೆ ತೊಂದರೆಯಾಗದಂತೆ ಕಂಪ್ಯೂಟರ್, ಪ್ರಿಂಟಿಂಗ್ ಮಿಷನ್ ಸೌಲಭ್ಯ ವ್ಯವಸ್ಥೆ ಮಾಡಿಕೊಂಡು ದಿನಕ್ಕೆ ಕನಿಷ್ಠ 30-40 ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸೇರಿ ವಿವಿಧ ಪ್ರಮಾಣಪತ್ರಗಳನ್ನು ಒದಗಿಸಲಾಗುತ್ತಿದೆ. ಪೂರ್ಣ ಪ್ರಮಾಣದ ವ್ಯವಸ್ಥೆ ಮಾಡಿಕೊಳ್ಳಲಾಗುವುದು. ಜನತೆಗೆ ಯಾವುದೇ ತೊಂದರೆಯಾಗದಂತೆ ಸೇವೆ ಒದಗಿಸಲಾಗುವುದು ಎಂದು ತಿಳಿಸಿದರು.

ತಹಸೀಲ್ದಾರ್ ಮಹೇಶ್ ಎಸ್. ಪತ್ರಿ, ತಾಪಂ ಇಒ ಜಿ.ಕೆ. ಹೊನ್ನಯ್ಯ, ಪಿಡಿಒ ಕರಿಯಪ್ಪ ಮತ್ತಿತರರು ಹಾಜರಿದ್ದರು.