ಹೂವಿನಹಡಗಲಿ: ತಾಲೂಕಿನಾದ್ಯಂತ ಭಕ್ತರು ಬುಧವಾರ ಸಡಗರದಿಂದ ಮಹಾಶಿವರಾತ್ರಿ ಆಚರಿಸಿದರು. ಈಶ್ವರ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದರು. ದೇವರಿಗೆ ಹಣ್ಣು, ಜೇನುತುಪ್ಪ, ವಿಶೇಷ ಖಾದ್ಯಗಳನ್ನು ಸಮರ್ಪಿಸಿದರು.
ಬೆಳಗ್ಗೆ ಮೌನವಾಗಿ ಪಾದ್ರಯಾತ್ರೆ ನಡೆಸುವ ಮೂಲಕ ತುಂಗಭದ್ರಾ ನದಿಯಿಂದ ನೀರನ್ನು ತಂದು ಪಟ್ಟಣದ ಕಲ್ಲೇಶ್ವರ ಸ್ವಾಮಿಗೆ ಅಭಿಷೇಕ ಮಾಡಲಾಯಿತು. ನಂತರ ರುದ್ರಹೋಮ, 101 ಪೂರ್ಣಕುಂಭದೊಂದಿಗೆ ಪಟ್ಟಣದ ಆಂಜನೇಯ ಸ್ವಾಮಿ ದೇವಸ್ಥಾನದಿಂದ ಕಲ್ಲೇಶ್ವರ ಸ್ವಾಮಿ ದೇವಸ್ಥಾನದವರೆಗೂ ಎತ್ತುಗಳ ಮೆರವಣಿಗೆ ಮಾಡಲಾಯಿತು. ದೇವಸ್ಥಾನವನ್ನು ವಿವಿಧ ಹೂಗಳಿಂದ ಅಲಂಕಾರ ಮಾಡಲಾಗಿತ್ತು.
ಪಟ್ಟಣದ ಮಲ್ಲಿಕಾರ್ಜುನ, ಗೋಣಿ ಬಸವೇಶ್ವರ, ಪಾತಾಳೇಶ್ವರ, ವಿಶ್ವನಾಥ, ಸೋಗಿಯ ವೀರಭದ್ರೇಶ್ವರ ದೇವಸ್ಥಾನದಲ್ಲಿ ಅಭಿಷೇಕ ನಡೆದವು. ಮೈಲಾರಲಿಂಗೇಶ್ವರ, ಕುರುವತ್ತಿ ಬಸವೇಶ್ವರ, ಬೆಟ್ಟದ ಮಲ್ಲೇಶ್ವರ, ಹೊಳಗುಂದಿ ಸಿದ್ದಲಿಂಗೇಶ್ವರ ಹಾಗೂ ಇತರ ಸುಕ್ಷೇತ್ರಗಳಲ್ಲಿ ನೂರಾರು ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ರಾತ್ರಿ ಗವಿಮಠದ ಡಾ.ಹಿರಿಶಾಂತವೀರ ಸ್ವಾಮೀಜಿ ನೇತೃತ್ವದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ನಡೆಯಿತು. ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶಿವಲಿಂಗಗಳ ಮೆರವಣಿಗೆ ನಡೆಯಿತು. ರಾತ್ರಿ ಜಾಗರಣೆ ಅಂಗವಾಗಿ ವಿವಿಧೆಡೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.