ಜಿಲ್ಲೆ

100ನೇ ಹುಟ್ಟುಹಬ್ಬ ಆಚರಿಸಿದ ನಿವೃತ್ತ ಯೋಧ

ನಾಪೋಕ್ಲು: ಚೇರಂಬಾಣೆಯ ಕೊಳಗದಾಳು ಗ್ರಾಮದ ಶತಾಯುಷಿ, ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ್ದ ನಿವೃತ್ತ ಯೋಧ ಅಜ್ಜಿನಂಡ ಎಂ.ಮೊಣ್ಣಪ್ಪ ಅವರನ್ನು ಚೇರಂಬಾಣೆ ಕೊಡವ ಸಮಾಜದಲ್ಲಿ ಅವರ ನೂರನೇ ವರ್ಷದ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ದಿವಂಗತ ಅಜ್ಜಿನಂಡ ಮೇದಪ್ಪ ಹಾಗೂ ಚಿಣ್ಣವ್ವ ದಂಪತಿಯ ಪುತ್ರ ಶತಾಯುಷಿ ಎಂ.ಮೊಣ್ಣಪ್ಪ ಅವರನ್ನು ಕೊಡವ ಸಾಂಪ್ರದಾಯಿಕ ಉಡುಪಿನೊಂದಿಗೆ ದುಡಿ ಕೊಟ್ ಪಾಟ್ ಮೂಲಕ ಕರೆತರಲಾಯಿತು. ಬಳಿಕ ಕೋಟೆರ ಪ್ರಭು ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಲಾಯಿತು.

ಅಜ್ಜಿನಂಡ ಎಂ.ಮೊಣ್ಣಪ್ಪ ಅವರ ಸಹೋದರ ಅಪ್ಪಣ್ಣ (97) ಜತೆಯಲ್ಲಿ ಉಪಸ್ಥಿತರಿದ್ದರು. ಬೇಂಗೂರು ನಾಡು ಕಡಪಾಲಪ್ಪ ದೇವಸ್ಥಾನದ ಅಧ್ಯಕ್ಷ ತೇಲಪಂಡ ಕೆ ಮಂದಣ್ಣ, ನಿವೃತ್ತ ಪೊಲೀಸ್ ಅಧಿಕಾರಿ ಮಣವಟ್ಟಿರ ಸಿ.ಕುಶಾಲಪ್ಪ ಹಾಗೂ ಮುಖಂಡ ಪ್ರೊ.ಎಂ.ಡಿ.ನಂಜುಂಡ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಚೇರಂಬಾಣೆ ಕೊಡವ ಸಮಾಜದ ಅಧ್ಯಕ್ಷ ಬಾಚರಣಿಯಂಡ ಪಿ.ಗಣಪತಿ, ಒಲಿಂಪಿಯನ್ ಚೆಪ್ಪುಡಿರ ಎಸ್. ಪೂಣಚ್ಚ, ಸಿಎನ್‌ಸಿ ಅಧ್ಯಕ್ಷ ನಂದಿನೆರವಂಡ ನಾಚಪ್ಪ, ಕೊಡಗು ಏಕೀಕರಣ ರಂಗದ ಪ್ರಮುಖ ತಮ್ಮು ಪೂವಯ್ಯ, ಕೊಡಗು ಏಲಕ್ಕಿ ಸಂಘದ ಅಧ್ಯಕ್ಷ ಸೂದನ ಈರಪ್ಪ ಇತರರು ಉಪಸ್ಥಿತರಿದ್ದರು.