ಆನೇಕಲ್: ಮೊಬೈಲ್ ಹಾಗೂ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಆನೇಕಲ್ ಉಪವಿಭಾಗದ ಜಿಗಣಿ ಪೊಲೀಸರು ಬಂಧಿಸಿದ್ದಾರೆ.
ಬನ್ನೇರುಘಟ್ಟ ನಿವಾಸಿ ಅಜಯ್ ಕುಮಾರ್ (23), ಚಿತ್ರದುರ್ಗದ ಪವನ್ ಕುಮಾರ್ (23) ಹಾಗೂ ಜಿಗಣಿಯ ಕ್ಯಾಲಸನಹಳ್ಳಿ ಗ್ರಾಮದ ಸತೀಶ್ (23) ಬಂಧಿತರು.
ಆರೋಪಿಗಳಿಂದ ವಿವಿಧ ಕಂಪನಿಯ 100 ಕ್ಕೂ ಹೆಚ್ಚು ಮೊಬೈಲ್ ಹಾಗೂ 10 ಬೈಕ್, ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ.
ಜಿಗಣಿ ಹಾಗೂ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದ ಕಂಪನಿಗಳಿಂದ ಕೆಲಸ ಮುಗಿಸಿಕೊಂಡು ರಾತ್ರಿ ವೇಳೆಯಲ್ಲಿ ನಡೆದು ಬರುವ ಕಾರ್ಮಿಕರನ್ನು ಅಡ್ಡಗಟ್ಟುತ್ತಿದ್ದ ಖದೀಮರು ಮಾರಕಾಸ್ತ್ರಗಳಿಂದ ಬೆದರಿಸಿ ಮೊಬೈಲ್ ಹಾಗೂ ಹಣ ಕಸಿದು ಪರಾರಿಯಾಗುತ್ತಿದ್ದರು. ಜತೆಗೆ ಬೆಲೆಬಾಳುವ ದ್ವಿಚಕ್ರ ವಾಹನಗಳನ್ನು ಕಳ್ಳತನ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಸಾಕಷ್ಟು ದೂರು ಬಂದಿದ್ದವು. ಈ ಹಿನ್ನೆಲೆಯಲ್ಲಿ ಜಿಗಣಿ ಇನ್‌ಸ್ಪೆಕ್ಟರ್ ಶೇಖರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಮೊಬೈಲ್ ಹಾಗೂ ದ್ವಿಚಕ್ರ ವಾಹನ ಕಳ್ಳತನದ ಎರಡು ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿದೆ.
ಜಿಗಣಿ ಠಾಣೆಯಲ್ಲಿ ಬೆಂಗಳೂರು ಗ್ರಾಮಾಂತರ ಎಸ್‌ಪಿ ಡಾ.ಕೆ.ವಂಶಿಕೃಷ್ಣ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪೊಲೀಸರ ಕಾರ್ಯಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು. ಆನೇಕಲ್ ತಾಲೂಕು ವ್ಯಾಪ್ತಿಯಲ್ಲಿ ಮೊಬೈಲ್ ಕಳವು ಆಗಿರುವವರು ಮೊಬೈಲ್ ಐಎಂಐ ನಂಬರ್ ಹೊಂದಿರುವ ಬಾಕ್ಸ್ ಇದ್ದರೆ ಅಂತಹವರು ಜಿಗಣಿ ಠಾಣೆಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದಾಗಿದೆ ಎಂದು ವೃತ್ತ ನಿರೀಕ್ಷಕ ಬಿ.ಕೆ. ಶೇಖರ್ ತಿಳಿಸಿದರು.