ಜಿಲ್ಲೆ

100ಕ್ಕೂ ಹೆಚ್ಚು ಜನ ಬಿಜೆಪಿ ಸೇರ್ಪಡೆ

Hassan

ಬೇಲೂರು: ಪಟ್ಟಣದ 8ನೇ ವಾರ್ಡ್‌ನ ಚನ್ನಕೇಶವನಗರದಲ್ಲಿ 100ಕ್ಕೂ ಹೆಚ್ಚು ಜನರು ಕಾಂಗ್ರೆಸ್ ಮತ್ತು ಜೆಡಿಎಸ್ ತೊರೆದು ಬೇಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್.ಕೆ. ಸುರೇಶ್ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡರು.


ಬೇಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಚ್.ಕೆ. ಸುರೇಶ್ ಮಾತನಾಡಿ, ನನಗೆ ಈ ಬಾರಿ ಒಂದು ಅವಕಾಶ ಕೊಟ್ಟರೆ 20-30 ವರ್ಷಗಳಿಂದ ಕಾಣದ ಅಭಿವೃದ್ಧಿಯನ್ನು ಕೆಲವೇ ದಿನಗಳಲ್ಲಿ ಮಾಡಿಸಿ ತೋರಿಸುತ್ತೇನೆ ಎಂದರು.


ನಿತ್ಯ ದುಡಿಮೆ ಅವಲಂಬಿಸಿ ಬದುಕುವ ನಿಮ್ಮ ಬದುಕು ಕಷ್ಟಕರವಾಗಿದೆ. ನನಗೆ ಒಂದು ಬಾರಿ ಆಶೀರ್ವದಿಸಿ ಕಳೆದ 20-30 ವರ್ಷಗಳಿಂದ ಆಗದ ಕೆಲಸವನ್ನು ಕೆಲವೇ ದಿನದಲ್ಲಿ ಮಾಡಿಸುತ್ತೇನೆ. ಜತೆಗೆ ಇಲ್ಲಿಗೆ ಬೇಕಾದ ಎಲ್ಲ ಮೂಲಸೌಲಭ್ಯಗಳನ್ನು ಕಲ್ಪಿಸಿ ಕೊಡುತ್ತೇನೆ ಎಂದರು.


ಪುರಸಭೆ ನಾಮಿನಿ ಸದಸ್ಯ ಪೈಂಟ್ ರವಿ ಮಾತನಾಡಿ, ಚನ್ನಕೇಶವ ನಗರದ ನಿವಾಸಿಗಳು ನನ್ನ ಕುಟುಂಬದ ಸದಸ್ಯರಿದ್ದಂತೆ. ನಿಮ್ಮ ಮನೆಯ ಒಬ್ಬ ಸದಸ್ಯನಾಗಿ ಕಷ್ಟ ಸುಖಗಳಲ್ಲಿ ಸ್ಪಂದಿಸಿದ್ದೇನೆ. ಆದರೆ, ಇಲ್ಲಿ ಚುನಾಯಿತರಾದ ಕಾಂಗ್ರೆಸ್ ಮತ್ತು ಜೆಡಿಎಸ್ ಜನಪ್ರತಿನಿಧಿಗಳು ಇಲ್ಲಿಯವರೆಗೆ ನಿಮ್ಮ ಭಾವನೆಗಳಿಗೆ ಸ್ಪಂದಿಸಿಲ್ಲ. ಇಲ್ಲಿನ ಮೂಲಸೌಕರ್ಯಗಳಿಗೆ ಆದ್ಯತೆ ನೀಡದೆ ಅವರಿಗೆ ಸಿಕ್ಕ ಅವಧಿಯಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ದೂರಿದರು.


ಬಿಜೆಪಿ ತಾಲೂಕು ಅಧ್ಯಕ್ಷ ಅಡಗೂರು ಆನಂದ್, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಸಿ.ಎಸ್. ಪ್ರಕಾಶ್, ಚಿನ್ನೇನಹಳ್ಳಿ ಗಂಗೇಶ್, ಬಿಜೆಪಿ ನಗರಾಧ್ಯಕ್ಷ ವಿನಯ್, ಚನ್ನಕೇಶವ ನಗರದ ನಿವಾಸಿಗಳಾದ ಎಂ.ಜಿ. ನಿಂಗರಾಜ್, ಮಂಜುನಾಥ್, ಸಿದ್ದೇಶ್, ರಾಜು, ನಾಗೇಂದ್ರ, ವಿನಯ್, ಮುರುಳಿ, ಅಭಿಷೇಕ್, ಮಂಜುನಾಥ್, ನಾಗರಾಜ್ ಇತರರಿದ್ದರು.