ಜಿಲ್ಲೆ

ಕಲಿಕೆಗೆ ಕಲೆ ಪೂರಕ, ಮಾರಕವಲ್ಲ...

ಮುರಳಿ ಕಡೇಕಾರ್​ ಅಭಿಪ್ರಾಯ

ನೃತ್ಯ ಶಂಕರ ಸರಣಿಯ ಶತ ಸಂಭ್ರಮ

ವಿಜಯವಾಣಿ ಸುದ್ದಿಜಾಲ ಉಡುಪಿ

ಶೃದ್ಧೆ, ಬದ್ಧತೆಯಿಂದ ಶ್ರೇಷ್ಠತೆ ಗಳಿಸಿಕೊಂಡಿರುವ ನೃತ್ಯ ನಿಕೇತನ ಕೊಡವೂರು ಸಂಸ್ಥೆಯು ವಿದ್ಯಾರ್ಥಿಗಳೊಂದಿಗೆ ನೃತ್ಯ ಗುರುಗಳನ್ನೂ ಸೃಷ್ಟಿಸಿದ ಹಿರಿಮೆ ಹೊಂದಿದೆ. ತನ್ಮೂಲಕ ನಾಡಿನ ಸಾಂಸ್ಕೃತಿಕ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡುತ್ತಿದೆ. ಕಲೆ ಎಂದಿಗೂ ಕಲಿಕೆಗೆ ಪೂರಕವಾಗಿರುತ್ತದೆಯೇ ಹೊರತು ಮಾರಕವಾಗಿರಲು ಸಾಧ್ಯವಿಲ್ಲ ಎಂದು ಯಕ್ಷಗಾನ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್​ ಅಭಿಪ್ರಾಯಪಟ್ಟರು.

ಉಡುಪಿ ಕೊಡವೂರಿನ ಶ್ರೀ ಶಂಕರನಾರಾಯಣ ದೇವಳದಲ್ಲಿ ನೃತ್ಯ ನಿಕೇತನ ಕೊಡವೂರು ಇತ್ತೀಚೆಗೆ ಆಯೋಜಿಸಿದ್ದ ನೃತ್ಯ ಶಂಕರ ನಾಟ್ಯ ಸರಣಿಯ 100ನೇ ಪ್ರಸ್ತುತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಶಸ್ತಿ ಪ್ರದಾನ

ಕಲಾ ದಂಪತಿ ಸುಧೀರ ರಾವ್​ ಹಾಗೂ ಮಾನಸಿ ಸುಧೀರ ಅವರಿಗೆ ದೇವಳದ ವತಿಯಿಂದ ಶಂಕರನಾರಾಯಣ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಉದ್ಯಮಿ ಸಾಧು ಸಾಲಿಯಾನ್​, ಕಲಾ ಪೋಷಕ ವಿಶ್ವನಾಥ ಶೆಣೈ, ರಂಗ ಕಲಾವಿದ ಎಂ.ಶ್ರೀನಿವಾಸ ಭಟ್​ ಶುಭ ಹಾರೈಸಿದರು. ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯರಾದ ರಾಜ ಸೇರಿಗಾರ, ಭಾಸ್ಕರ ಪಾಲನ್​, ಯಶೋಧರ ಸಾಲಿಯಾನ್​, ಕೆ.ಬಾಬು ಉಪಸ್ಥಿತರಿದ್ದರು.

ಸಂಸ್ಥೆಯ ನಿರ್ದೇಶಕ ವಿದ್ವಾನ್​ ಸುಧೀರ ರಾವ್​ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಪ್ರಕಾಶ ಜಿ. ಕೊಡವೂರು ಅಭಿನಂದನಾ ಮಾತುಗಳನ್ನಾಡಿದರು. ಸಂಸ್ಥೆಯ ನಿರ್ದೇಶಕಿ ಮಾನಸಿ ಸುಧೀರ ಕೃತಜ್ಞತಾ ನುಡಿಯಾಡಿದರು.

ಮಧುಶ್ರೀ ಪ್ರಾರ್ಥಿಸಿದರು. ಪೂರ್ಣಿಮಾ ಜನಾರ್ದನ ನಿರೂಪಿಸಿದರು. ಜನಾರ್ದನ ಕೊಡವೂರು ವಂದಿಸಿದರು. ಸಭಾ ಕಾರ್ಯಕ್ರಮದ ಬಳಿಕ ನೃತ್ಯ ಶಂಕರ ಸರಣಿಯ 100ನೇ ಪ್ರಸ್ತುತಿ ಪ್ರದರ್ಶನಗೊಂಡಿತು.