ಜಿಲ್ಲೆ

1000 ಚ.ಕಿ.ಮೀ. ಗ್ರೇಟರ್ ಬೆಂಗಳೂರು

ರಮೇಶ್​ ಕುಮಾರ್​​ ಬಿ ಎಡಮೋಳೆ

| ಗಿರೀಶ್ ಗರಗ ಬೆಂಗಳೂರು

ಬಿಬಿಎಂಪಿ ವ್ಯಾಪ್ತಿಯನ್ನು ಇನ್ನಷ್ಟು ಹಿಗ್ಗಿಸಲು ಸರ್ಕಾರ ನಿರ್ಧರಿಸಿದ್ದು, ಅದಕ್ಕಾಗಿ ಕಾಯ್ದೆ ಜಾರಿಗೆ ತರಲಾಗುತ್ತಿದೆ. ಆ ಮೂಲಕ 1 ಸಾವಿರ ಚದರ ಕಿ.ಮೀ. ವ್ಯಾಪ್ತಿಯ ಮೊದಲ ನಗರಪಾಲಿಕೆ ಎಂಬ ಹೆಗ್ಗಳಿಕೆಗೆ ಬಿಬಿಎಂಪಿ ಪಾತ್ರವಾಗಲಿದೆ.

2008ರಲ್ಲಿ 110 ಹಳ್ಳಿಗಳು, 7 ನಗರಸಭೆ, 1 ಪುರಸಭೆಯನ್ನು ಬಿಎಂಪಿಗೆ ಸೇರಿಸಿ ಬಿಬಿಎಂಪಿಯನ್ನಾಗಿ ಪರಿವರ್ತಿಸಲಾಯಿತು. 225 ಚದರ ಕಿ.ಮೀ. ವ್ಯಾಪ್ತಿಯ ಮಹಾನಗರ ಪಾಲಿಕೆ ಆಡಳಿತವನ್ನು 820 ಚದರ ಕಿ.ಮೀ.ಗೆ ವಿಸ್ತರಿಸಲಾಯಿತು. 100 ವಾರ್ಡ್​ಗಳನ್ನು 198 ವಾರ್ಡ್​ಗೆ ಹೆಚ್ಚಿಸಲಾಯಿತು. ಇದೀಗ ಮತ್ತೆ 200 ಚದರ ಕಿ.ಮೀ. ವ್ಯಾಪ್ತಿಯ ಭೂಪ್ರದೇಶವನ್ನು ಬಿಬಿಎಂಪಿಗೆ ಸೇರಿಸಲು ಸರ್ಕಾರ ಸಿದ್ಧತೆ ನಡೆಸಿದೆ. ವಾರ್ಡ್ ಗಳ ಸಂಖ್ಯೆಯನ್ನು 250ಕ್ಕೆ ಹೆಚ್ಚಿಸಲಾಗುತ್ತಿದೆ. ಇದರಿಂದ ದೇಶದಲ್ಲಿಯೇ 1 ಸಾವಿರ ಚದರ ಕಿ.ಮೀ.ಗೂ ಹೆಚ್ಚಿನ ಆಡಳಿತ ವ್ಯಾಪ್ತಿ ಹೊಂದಿರುವ ಮೊದಲ ನಗರಪಾಲಿಕೆಯಾಗಿ ಪರಿವರ್ತನೆಯಾಗಲಿದೆ.

ದೆಹಲಿಯದ್ದು 1,397 ಚದರ ಕಿ.ಮೀ.: 1,397 ಚದರ ಕಿ.ಮೀ. ವ್ಯಾಪ್ತಿಯಿದ್ದ ದೆಹಲಿ ಮುನ್ಸಿಪಲ್ ಕಾಪೋರೇಷನ್ ದೇಶದಲ್ಲಿ ಅತಿ ದೊಡ್ಡ ನಗರಪಾಲಿಕೆ ಎಂಬ ಹೆಗ್ಗಳಿಕೆ ಹೊಂದಿತ್ತು. 2012ರಲ್ಲಿ ದೆಹಲಿ ನಗರಪಾಲಿಕೆಯನ್ನು ವಿಂಗಡಿಸಿ ಮೂರು ಪಾಲಿಕೆಗಳನ್ನು ರಚಿಸಿ ಭೂಪ್ರದೇಶಗಳನ್ನು ಹಂಚಲಾಯಿತು. ಅದರಿಂದಾಗಿ ಬಿಬಿಎಂಪಿ ಮೊದಲ ಸ್ಥಾನ ಪಡೆಯುವಂತಾಗಿತ್ತು. ಚೆನ್ನೈ ನಗರಪಾಲಿಕೆ 426 ಚದರ ಕಿ.ಮೀ., ಕೋಲ್ಕತ 206 ಚದರ ಕಿ.ಮೀ. ಹಾಗೂ ಮುಂಬೈ 480 ಚದರ ಕಿ.ಮೀ. ಅಧಿಕಾರ ವ್ಯಾಪ್ತಿಯನ್ನು ಹೊಂದಿವೆ.

ದೆಹಲಿಯ ಮೂರು ನಗರಪಾಲಿಕೆಗಳಲ್ಲಿ ಒಟ್ಟು 272 ವಾರ್ಡ್​ಗಳಿವೆ. ಅವುಗಳನ್ನು 13 ವಲಯಗಳಲ್ಲಿ ವಿಂಗಡಿಸಲಾಗಿದೆ. ಅದೇ ರೀತಿ ಚೆನ್ನೈ ನಗರ ಪಾಲಿಕೆಯಲ್ಲಿ 200 ವಾರ್ಡ್​ಗಳಿದ್ದು, 15 ವಲಯಗಳಿಗೆ ಹಂಚಲಾಗಿದೆ. ಕೋಲ್ಕತದಲ್ಲಿ 144 ವಾರ್ಡ್, ಮುಂಬೈನಲ್ಲಿ 227 ವಾರ್ಡ್​ಗಳಿವೆ. ಬಿಬಿಎಂಪಿ ವ್ಯಾಪ್ತಿ ವಿಸ್ತರಿಸಿ 250 ವಾರ್ಡ್​ಗಳನ್ನು ರಚಿಸುವುದು ಹಾಗೂ ಅವುಗಳನ್ನು 15 ವಲಯಗಳಿಗೆ ವಿಂಗಡಿಸುವ ಬಗ್ಗೆ ರ್ಚಚಿಸಲಾಗುತ್ತಿದೆ.

ಮೇಯರ್ ಇನ್ ಕೌನ್ಸಿಲ್​ಗೆ ಸರ್ಕಾರದ ಚಿಂತನೆ

ಗ್ರೇಟರ್ ಬೆಂಗಳೂರು ನಗರ ಪಾಲಿಕೆ ರಚನೆಗೆ ಮುಂದಾಗಿರುವ ಸರ್ಕಾರ, ಮೇಯರ್ ಇನ್ ಕೌನ್ಸಿಲ್ ವ್ಯವಸ್ಥೆ ಜಾರಿಗೊಳಿಸುವ ಬಗ್ಗೆ ಚಿಂತಿಸುತ್ತಿದೆ. ಬೆಂಗಳೂರು ಕಾಯ್ದೆ ರಚನೆಗೆ ನೇಮಿಸಲಾಗಿರುವ ಶಾಸಕ ಎಸ್. ರಘು ನೇತೃತ್ವದ ಸಮಿತಿ ಆ ಬಗ್ಗೆ ಚರ್ಚೆಗಳನ್ನು ನಡೆಸಿದೆ. ಕೋಲ್ಕತದಲ್ಲಿ ಈಗಾಗಲೇ ಮೇಯರ್ ಇನ್ ಕೌನ್ಸಿಲ್ ವ್ಯವಸ್ಥೆ ಜಾರಿಯಲ್ಲಿದೆ. ಅದರಂತೆ ಮೇಯರ್ ಜತೆಗೆ ಉಪಮೇಯರ್ ಸೇರಿ 14 ಸದಸ್ಯರಿರುವ ಸಮಿತಿ ಕಾರ್ಯನಿರ್ವಹಿಸಲಿದೆ.