ಹನಗೋಡು/ಕಂಪಲಾಪುರ: ಹೋಬಳಿಯ ಚಿಲ್ಕುಂದ ತಂಬಾಕು ಹರಾಜು ಮಾರುಕಟ್ಟೆಯ ಸಂಖ್ಯೆ 62ರಲ್ಲಿ 2022-23 ನೇ ಸಾಲಿನ ತಂಬಾಕು ಹರಾಜು ಪ್ರಕ್ರಿಯೆಗೆ ಶಾಸಕ ಎಚ್.ಪಿ. ಮಂಜುನಾಥ್ ರೈತ ಮುಖಂಡರೊಂದಿಗೆ ಸೋಮವಾರ ಚಾಲನೆ ನೀಡಿದರು.
ರಾಜ್ಯದಲ್ಲಿ ಈ ವರ್ಷ ನೂರು ಮಿಲಿಯನ್ ಕೆಜಿ ತಂಬಾಕು ಬೆಳೆಯಲು ಅನುಮತಿ ನೀಡಿದ್ದು, ಕೇವಲ 60 ಮಿಲಿಯನ್ ಕೆಜಿ ತಂಬಾಕು ಬೆಳೆ ಬಂದಿರುವ ಬಗ್ಗೆ ಮಾಹಿತಿ ಇದೆ ಎಂದು ಅವರು ತಿಳಿಸಿದರು.
ತಂಬಾಕು ರೈತರು ಪ್ರಸ್ತುತ ಸಾಲಿನಲ್ಲಿ ಬಹಳ ಸಂಕಷ್ಟದಲ್ಲಿದ್ದಾರೆ. ಅವರ ಭವಿಷ್ಯದ ದೃಷ್ಟಿಯಿಂದ ಮಂಡಳಿ ಅಧಿಕಾರಿಗಳು ರೈತರ ಶ್ರಮ ಮತ್ತು ಮುಂದಿನ ಅವರ ಭವಿಷ್ಯ ಗಮನದಲ್ಲಿಟ್ಟುಕೊಂಡು ಬೆಳೆಗೆ ಉತ್ತಮ ಬೆಲೆ ನೀಡಬೇಕು. ರೈತರಿಗೆ ಮೂಲ ಸೌಕರ್ಯಗಳನ್ನು ಒದಗಿಸಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಂಬಾಕು ಮಂಡಳಿ ಸದಸ್ಯ ದಿನೇಶ್ ಮಾತನಾಡಿ, ತಂಬಾಕು ಹರಾಜು ಮಾರುಕಟ್ಟೆಯಲ್ಲಿ ರೈತರಿಗೆ ಮೂಲಸೌಕರ್ಯ ಒದಗಿಸಿ ಕೊಡುವ ಮತ್ತು ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ರೈತರ ಮನವಿ: ಇದೇ ಸಂದರ್ಭದಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿದ ಹಲವಾರು ರೈತರು ಹರಾಜು ಮಾರುಕಟ್ಟೆಯಲ್ಲಿ ಮೂಲಸೌಕರ್ಯ, ಉತ್ತಮ ದರ, ಹರಾಜಿನಲ್ಲಿ ಪಾರದರ್ಶಕತೆ ಕಾಪಾಡುವಂತೆ ಶಾಸಕರು, ತಂಬಾಕು ಮಂಡಳಿ ಅಧಿಕಾರಿಗಳು ಮತ್ತು ಖರೀದಿದಾರರಿಗೆ ಮನವಿ ಮಾಡಿದರು.
ಮೊದಲ ದಿನದ ಹರಾಜು ಪ್ರಕ್ರಿಯೆಯಲ್ಲಿ ಐಟಿಸಿ, ಜಿಪಿಐ, ಡೆಕ್ಕನ್, ಮಹಮ್ಮದ್, ಅಲಯನ್ಸ್-1, ಪ್ರಕಾಶಂ, ಸಂಜೀವ್ ಎಂಟರ್‌ಪ್ರೈಸಸ್, ಜಿಪಿಎಲ್, ವೈಪಿಎಲ್, ಎಂಇಪಿ, ಕಾರ್ಟೆಲ್ ಕಂಪನಿ ಸೇರಿದಂತೆ 25 ಕಂಪನಿಗಳು ಭಾಗವಹಿಸಿದ್ದವು. ಈ ಪೈಕಿ 15 ಕಂಪನಿಗಳು ತಂಬಾಕು ಖರೀದಿಸಿವೆ. ಮಾರುಕಟ್ಟೆಗೆ 27 ಬೇಲ್‌ಗಳನ್ನು ಮಾರಾಟಕ್ಕಿಟ್ಟಿದ್ದರು. ಉತ್ತಮ ತಂಬಾಕು ಕೆ.ಜಿ.ಗೆ 201 ರೂ.ಗಳಿಗೆ ಮಾರಾಟವಾಯಿತು. ಕಳೆದ ವರ್ಷ 185 ರೂ. ಬೆಲೆಯಿಂದ ಆರಂಭವಾಗಿತ್ತು. ಇಂದು 200 ರೂ.ನಿಂದ ಪ್ರಾರಂಭವಾಯಿತು.
ಚಿಲ್ಕುಂದ ಗ್ರಾಪಂ ಅಧ್ಯಕ್ಷೆ ಶೋಭಾ, ಉಪಾಧ್ಯಕ್ಷ ಜಯಣ್ಣ, ಚಿಲ್ಕುಂದ ಹರಾಜು ಅಧೀಕ್ಷಕ ಡಾ.ಬ್ರಿಜ್‌ಭೂಷಣ್, ಕ್ಷೇತ್ರ ವಿಸ್ತರಣಾಧಿಕಾರಿಗಳಾದ ಸವಿನಯ್, ನಾಗರಾಜ್, ಕಂಪ್ಯೂಟರ್ ಟೆಕ್ನಿಷಿಯನ್ ಶಿವಕುಮಾರ್, ತಂಬಾಕು ಬೆಳೆಗಾರರಾದ, ಕರಣಕರ, ಕಲ್ಲಹಳ್ಳಿ ಶಿವಬಸಪ್ಪ, ಕಣಗಾಲ್ ಮಲ್ಲೇಶ್, ಜೆ.ಕೆ.ಶಿವಣ್ಣ, ವಿಷಕಂಠಪ್ಪ, ಕಚುವಿನಹಳ್ಳಿ ಲೋಕೇಶ್, ಪ್ರವೀಣ್, ಅರುಣ, ಭಾಸ್ಕರ್, ನವೀನ, ಸುಬ್ಬು, ಸಣ್ಣತಿಮ್ಮೇಗೌಡ, ಬೋಮ್ಮೇಗೌಡ ಸೇರಿದಂತೆ ಅನೇಕ ಬೆಳೆಗಾರರು ಹಾಜರಿದ್ದರು.