ಜಿಲ್ಲೆ

100 ನಿಮಿಷಗಳಲ್ಲಿ ಪ್ರತಿಕ್ರಿಯೆ ನೀಡಿ: ಎಡಿಸಿ ಆನಂದ್

ಹಾಸನ : ಚುನಾವಣೆ ಸಂದರ್ಭದಲ್ಲಿ ಸಿ ವಿಜಿಲ್‌ನಲ್ಲಿ ಬರುವ ದೂರು ಹಾಗೂ ಅರ್ಜಿಗಳಿಗೆ 100 ನಿಮಿಷಗಳಲ್ಲಿ ಪ್ರತಿಕ್ರಿಯೆ ನೀಡಿ ಕ್ರಮವಹಿಸಬೇಕು. ಇಲ್ಲದಿದ್ದರೆ ದೂರು ಮೇಲಿನ ಹಂತಕ್ಕೆ ಹೋಗುತ್ತದೆ. ಹಾಗಾಗಿ ಜಾಗೃತೆಯಿಂದ ಕರ್ತವ್ಯ ನಿರ್ವಹಿಸುವಂತೆ ಅಪರ ಜಿಲ್ಲಾಧಿಕಾರಿ ಆನಂದ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ  ನಡೆದ ಚುನಾವಣೆ ನೀತಿ ಸಂಹಿತೆ ಕುರಿತು ದೂರು ದಾಖಲಿಸಲು ರೂಪಿಸಿರುವ ನಾಗರಿಕ ಸ್ನೇಹಿ ಸಿ ವಿಜಿಲ್ ಆಪ್ ಬಳಕೆ ಬಗ್ಗೆ ಚುನಾವಣಾಧಿಕಾರಿಗಳು ಸಹಾಯಕ ಚುನಾವಣಾಧಿಕಾರಿಗಳು ಎಫ್‌ಎಸ್‌ಟಿ ತಂಡದ ಮುಖ್ಯಸ್ಥರಿಗೆ ತರಬೇತಿ ಕಾರ್ಯಾಗಾರ ನಡೆಯಿತು.
ತುಂಬಾ ದೂರುಗಳು, ಫೋಟೋ, ವಿಡಿಯೋ, ಆಡಿಯೊ ದೂರುಗಳ ಬಗ್ಗೆ ತಕ್ಷಣ ಪ್ರತಿಕ್ರಿಯೆ ನೀಡಬೇಕು. ಬಂದಂತಹ ದೂರುಗಳು ನೈಜವೂ ಇರಬಹುದು. ಅರ್ಧ ಸತ್ಯ, ಅಸತ್ಯವೂ ಇರಬಹುದು. ಆದರೆ ತಕ್ಷಣ ಲಭ್ಯ ಸರ್ಕಾರಿ ಅಧಿಕಾರಿ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ಪರಿಶೀಲಿಸಿ ಕ್ರಮ ವಹಿಸಬೇಕು ಎಂದು ಎಡಿಸಿ ಹೇಳಿದರು.
ಎನ್.ಐ.ಸಿ ಅಧಿಕಾರಿ ರಾಮಕೃಷ್ಣ ಅವರು ಸಿ ವಿಜಿಲ್ ಆಪ್ ಬಳಕೆ ಬಗ್ಗೆ ಹಾಗೂ ಅದರ ಕಾರ್ಯ ವಿಧಾನದ ಬಗ್ಗೆ ಮಾಹಿತಿ ನೀಡಿದರು.
ಇದೇ ವೇಳೆ ಹಾಸನ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಲ್. ಯಶವಂತ್, ಕ್ಷೇತ್ರ ಶಿಕ್ಷಣಾಧಿಕಾರಿ ಬಲರಾಮ್, ಎಫ್.ಎಸ್.ಟಿ ತಂಡದ ಮುಖ್ಯಸ್ಥರು ಹಾಗೂ ಮತ್ತಿತರರು ಹಾಜರಿದ್ದರು.