ಜಿಲ್ಲೆ

ತೆರಿಗೆ ವಸೂಲಿಯಲ್ಲಿ ಶೇ.100ರ ಗುರಿ ಸಾಧನೆ

ಸೋಮನಾಥ ರೆಡ್ಡಿ

ನರಗುಂದ: ತಾಲೂಕಿನ ಪ್ರತಿಯೊಂದು ಗ್ರಾಪಂಗಳಲ್ಲಿ ತೆರಿಗೆ ವಸೂಲಾತಿ ವಿಶೇಷ ಅಭಿಯಾನ ಕೈಗೊಂಡಿದ್ದರ ಫಲವಾಗಿ ವೈಯಕ್ತಿಕ ಆಸ್ತಿಗಳ ತೆರಿಗೆ ವಸೂಲಾತಿ ಅಭಿಯಾನದಲ್ಲಿ ನರಗುಂದ ತಾಪಂ ಶೇ.100ರ ಗುರಿ ಸಾಧಿಸಿದೆ ಎಂದು ತಾಪಂ ಇಒ ಎಸ್.ಕೆ. ಇನಾಮದಾರ ಹೇಳಿದರು.

ತಾಲೂಕಿನ ಕೊಣ್ಣೂರ ಗ್ರಾಪಂ ಕಾರ್ಯಾಲಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸುದ್ಧಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ನರಗುಂದ ತಾಲೂಕಿನಲ್ಲಿ ಒಟ್ಟು 13 ಗ್ರಾಪಂ ಕಚೇರಿಗಳಿವೆ. ಒಟ್ಟು 4 ಕೋಟಿ 22 ಲಕ್ಷದ 95,875 ರೂಪಾಯಿ ಬಾಕಿ ಕರ ವಸೂಲಾತಿ ಪೈಕಿ ಈವರೆಗೆ 1.18 ಕೋಟಿ ರೂಪಾಯಿ ಚಾಲ್ತಿ ಕರ ವಸೂಲಾತಿ ಮಾಡಲಾಗಿದೆ. ಪ್ರಸಕ್ತ ವರ್ಷ ತೆರಿಗೆ ವಸೂಲಾತಿಯಲ್ಲಿ ಶೇ.100ರ ಗುರಿ ತಲುಪಿದ್ದೇವೆ ಎಂದರು. ತೆರಿಗೆ ವಸೂಲಾತಿಗೆ ನರಗುಂದ ತಾಪಂ, ಸ್ಥಳೀಯ ಗ್ರಾಪಂ ವತಿಯಿಂದ ವೈಯಕ್ತಿಕ ಆಸ್ತಿಗಳ ತೆರಿಗೆ ವಸೂಲಾತಿ ನಿರಂತರ ಅಭಿಯಾನ ನಡೆಸಲಾಗಿತ್ತು. ಇನ್ನುಳಿದ ಬಾಕಿ ಕರ ವಸೂಲಾತಿಗಾಗಿ ಮತ್ತಷ್ಟು ಸಾರ್ವಜನಿಕರ ಜಾಗೃತಿ ಅಭಿಯಾನ ಕೈಗೊಳ್ಳುವಂತೆ ಎಲ್ಲ ಗ್ರಾಪಂ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿಗೆ ಮೌಖಿಕ ಆದೇಶ ನೀಡಿದ್ದು, ನೋಟಿಸ್ ಕೂಡ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.

ಕೊಣ್ಣೂರ ಗ್ರಾಪಂ ಅಭಿವೃದ್ಧಿ ಅಧಿಕಾರಿ ಮಂಜುನಾಥ ಗಣಿ ಉಪಸ್ಥಿತರಿದ್ದರು.