ಬೆಂಗಳೂರು: ಕರೊನಾ ಸೋಂಕು ನಿಯಂತ್ರಣಕ್ಕಗಿ ಬಿಎಂಟಿಸಿ ಬಸ್ ಪ್ರಯಾಣದ ವೇಳೆ ಮಾಸ್ಕ್ ಧರಿಸದ ಪ್ರಯಾಣಿಕರಿಗೆ 100 ರೂ. ದಂಡ ವಿಧಿಸುವ ಮೂಲಕ ಕಟ್ಟುನಿಟ್ಟಿನ ಕ್ರಮ ಜಾರಿಗೆ ನಿಗಮ ಮುಂದಾಗಿದೆ.
ಲಾಕ್ಡೌನ್ ಸಡಿಲಿಕೆ ಬಳಿಕ ಬಸ್ ಸಂಚಾರ ಪುನರಾರಂಭವಾದ ಬೆನ್ನಲ್ಲೇ ನಿಗಮವು ಬಸ್ ಪ್ರಯಾಣದ ವೇಳೆ ಪ್ರಯಾಣಿಕರು ಮಾಸ್ಕ್ ಧರಿಸುವುದು ಹಾಗೂ ವ್ಯಕ್ತಿಗತ ಅಂತರ ಕಾಪಾಡುವುದು ಕಡ್ಡಾಯಗೊಳಿಸಿತ್ತು. ಆದರೆ, ಹಲವು ಪ್ರಯಾಣಿಕರು ಬಸ್ ಹತ್ತಿದ ತಕ್ಷಣ ಮಾಸ್ಕ್ ತೆಗೆದಿಡುವುದು ಹೆಚ್ಚಾಗಿತ್ತು. ನಿರ್ವಾಹಕರು ಪ್ರಯಾಣಿಕರಿಗೆ ಮಾಸ್ಕ್ ಧರಿಸುವಂತೆ ಸೂಚಿಸಿದರೂ, ಅದಕ್ಕೆ ಪ್ರಯಾಣಿಕರು ಪ್ರತಿಕ್ರಿಯಿಸುತ್ತಿರಲಿಲ್ಲ. ಕೆಲವು ಸಲ ನಿರ್ವಾಹಕರು ಮತ್ತು ಪ್ರಯಾಣಿಕರ ನಡುವೆ ಗದ್ದಲವೂ ನಡೆದಿತ್ತು. ಅಂತಹ ಪ್ರಯಾಣಿಕರಿಗೆ ಬಿಸಿ ಮುಟ್ಟಿಸಲು ಮುಂದಾಗಿರುವ ಬಿಎಂಟಿಸಿ, ಪ್ರಯಾಣದ ವೇಳೆ ಮಾಸ್ಕ್ ಧರಿಸದ ಪ್ರಯಾಣಿಕರಿಗೆ 100 ರೂ. ದಂಡ ವಿಧಿಸುವಂತೆ ಮಾರ್ಗ ತಪಾಸಣಾ ಸಿಬ್ಬಂದಿಗೆ ಸೂಚಿಸಿದೆ.
ಈ ಹಿನ್ನೆಲೆಯಲ್ಲಿ ತಪಾಸಣಾ ತಂಡಗಳು ಮಾರ್ಗಗಳಲ್ಲಿ ಬಸ್ ಪರಿಶೀಲಿಸಿ, ಮಾಸ್ಕ್ ಧರಿಸದ ಪ್ರಯಾಣಿಕರಿಗೆ ದಂಡ ವಸೂಲಿಗೆ ಮುಂದಾಗಿದೆ. ಮಾಸ್ಕ್ ಧರಿಸದ ಪ್ರಯಾಣಿಕರಿಗೆ ಮುಲಾಜಿಲ್ಲದೆ ದಂಡ ವಿಧಿಸುವಂತೆ ತಪಾಸಣಾ ಸಿಬ್ಬಂದಿಗೆ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.